ಬಾಗಲಕೋಟೆ : ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಆದಾಗ ಪ್ರತ್ಯೇಕ ರಾಜ್ಯದ ಬೇಡಿಕೆ ಕೂಗು ಇರಲಿದೆ. ಈಗ ಒಬ್ಬ ಜವಾಬ್ದಾರಿಯುತ ಮಂತ್ರಿಯಾಗಿದ್ದೇನೆ. ಹೀಗಾಗಿ, ಆ ವಿಚಾರ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾದಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ.
ಹೀಗಾಗಿ, ಉತ್ತರ ಕರ್ನಾಟಕ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿದೆ. ಹೀಗಾಗಿ, ಪ್ರತ್ಯೇಕ ರಾಜ್ಯದ ಕೂಗು ಸದ್ಯಕ್ಕೆ ಬೇಕಾಗಿಲ್ಲ. ಮುಂದೆ ಮೂರ್ನಾಲ್ಕು ವರ್ಷದ ನಂತರ ನೋಡೋಣ ಎಂದರು.
ಸದ್ಯ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಎಲ್ಲರೂ ತಲೆ ಕೆಡಿಸಿಕೊಂಡಿದ್ದೇವೆ. ಯೋಜನೆ ಈ ಅವಧಿಯಲ್ಲಿಯೇ ಆಗಲೇಬೇಕೆಂಬ ಹಠ ಇದೆ. ಕೃಷ್ಣಾ ನೀರು ಬೆಳಗಾವಿಗೆ ಅಷ್ಟೇ ಅಲ್ಲ.
ಬಾಗಲಕೋಟೆ, ವಿಜಯಪುರ ಹಾಗೂ ಹೈದರಾಬಾದ್ ಕರ್ನಾಟಕದ ಸಮಗ್ರ ನೀರಾವರಿಗೆ ಒಳಪಡಬೇಕು. ಅದಕ್ಕೆ ತೊಂದರೆ ಆದಾಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಇರುತ್ತದೆ ಎಂದರು.
Laxmi News 24×7