ವಿಜಯಪುರ: ಹಾನಗಲ್, ಸಿಂದಗಿ ಎರಡೂ ಕ್ಷೇತ್ರಗಳಲ್ಲಿ ದಿನೇ ದಿನೇ ಬಿಜೆಪಿ ಗೆಲುವು ನಿಶ್ಚಿತ ಎಂಬ ಸ್ಥಿತಿ ನಿರ್ಮಾಣವಾಗಿದೆ. ಉಪಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಶೂನ್ಯವಾಗಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದ್ದು, ಆತಂಕದಲ್ಲಿರುವ ಕಾಂಗ್ರೆಸ್, ಜೆಡಿಎಸ್ ಮೇಲ್ನೋಟದ ಹೋರಾಟ ನಡೆಸಿದ್ದಾರೆ ಅಷ್ಟೇ ಎಂದರು.
ಜನರ ಮುಂದೆ ಮಂಡಿಸಲು ವಿಷಯಗಳೇ ಇಲ್ಲದ ವಿಪಕ್ಷಗಳು ವ್ಯಕ್ತಿಗತ ಟೀಕೆಯಲ್ಲಿ ತೊಡಗಿವೆ. ಬರುವ ದಿನಗಳಲ್ಲಿ ಕಾಂಗ್ರೆಸ್ ವಿಳಾಸ ಕಳೆದುಕೊಳ್ಳಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ಬಹಿರಂಗ ಸಮರವೇ ನಡೆದಿದೆ ಎಂದರು.
ಯಡಿಯೂರಪ್ಪ ಅವರು ಅಧಿಕಾರಕ್ಕೆ ಬರುತ್ತಲೇ ರಾಜ್ಯದಲ್ಲಿ ನೆರೆ ಹಾವಳಿ ಬಾಧಿಸಿತು. ಕೋವಿಡ್ ಸಂಕಷ್ಟದಿಂದ ಅಭಿವೃದ್ಧಿಗೆ ತೊಡಕಾಗದಂತೆ ಯಡಿಯೂರಪ್ಪ ಹಾಗೂ ಇದೀಗ ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ ಎಂದರು.
ಕೆ.ಆರ್.ಪೇಟೆ, ಶಿರಾ ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷದ ಬಗ್ಗೆ ಕಾಂಗ್ರೆಸ್, ಜೆಡಿಎಸ್ ಹಗುರವಾಗಿ ಮಾತನಾಡಿದರೂ ಮತದಾರರು ಬಿಜೆಪಿ ಬೆಂಬಲಿಸಿದ್ದರು. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರಿಗೆ ಪಕ್ಷದ ಅಸ್ತಿತ್ವದ ಭಯದಿಂದಾಗಿ ಬಿಜೆಪಿ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಎರಡೂ ಪಕ್ಷಗಳು ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದ್ದು, ರಾಜಕೀಯ ಕಾರಣಕ್ಕೆ ಎಂಬುದು ಅಲ್ಪಸಂಖ್ಯಾತರಿಗೂ ಮನವರಿಕೆಯಾಗಿದೆ ಎಂದು ವಿಜಯೇಂದ್ರ ಹೇಳಿದರು.