ಮೋಹಕ ತಾರೆ ರಮ್ಯಾ ಚಿತ್ರರಂಗದಿಂದ ದೂರ ಇದ್ದಾರೆ. ಹೊಸ ಸಿನಿಮಾಗಳಲ್ಲಿ ನಟಿಸುತ್ತಿಲ್ಲ, ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಆದರೆ, ಚಿತ್ರರಂಗದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಗಮನಿಸುತ್ತಲೇ ಇರ್ತಾರೆ. ಯಾವ ಸಿನಿಮಾ ಬಂತು, ಯಾವ ಟ್ರೈಲರ್ ಬಂತು, ಯಾವ ಪೋಸ್ಟರ್ ಬಂತು ಎಂದು ಗಮನಿಸುವ ರಮ್ಯಾ ಇಷ್ಟವಾದರೆ ಆ ಚಿತ್ರದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಶುಭಹಾರೈಸುತ್ತಾರೆ.
ಇದೀಗ, ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರದ ಟ್ರೈಲರ್ ಬಗ್ಗೆ ರಮ್ಯಾ ಪ್ರತಿಕ್ರಿಯಿಸಿದ್ದಾರೆ. ಕೋಟಿಗೊಬ್ಬ ಟ್ರೈಲರ್ ವೀಕ್ಷಿಸಿರುವ ರಮ್ಯಾ, ಸುದೀಪ್ ಅವರನ್ನು ಹಾಲಿವುಡ್ ಸಿನಿಮಾದಲ್ಲಿ ಬರುವ ಬೆಂಜಮಿನ್ ಬಟನ್ ಪಾತ್ರಕ್ಕೆ ಹೋಲಿಸಿದ್ದಾರೆ.
”ನಮ್ಮ ಹೊಸ ಬೆಂಜಮಿನ್ ಬಟನ್ ಕಿಚ್ಚ ಸುದೀಪ್, ನಿಮಗೆ ವಯಸ್ಸೇ ಆಗಲ್ವಾ? ವಾಹ್ ಅದ್ಭುತ ಟ್ರೈಲರ್’ ಎಂದು ರಮ್ಯಾ ಇನ್ಸ್ಟಾಗ್ರಾಂದಲ್ಲಿ ಪೋಸ್ಟ್ ಹಾಕಿದ್ದಾರೆ. ಬೆಂಜಮಿನ್ ಬಟನ್ ಪಾತ್ರ ಏನಪ್ಪಾ ಅಂದ್ರೆ ಮುದುಕನಾಗಿ ಹುಟ್ಟಿ ಮಗುವಾಗಿ ಅಂತ್ಯವಾಗುವ ಕಥೆ. ಅಂದ್ರೆ ದಿನ ಕಳೆದಂತೆ ವಯಸ್ಸು ಹೆಚ್ಚಾಗಬೇಕು ಆದರೆ ಈ ಪಾತ್ರದಲ್ಲಿ ವಯಸ್ಸು ಕಡಿಮೆಯಾಗುತ್ತದೆ. ಅದನ್ನೆ ಸುದೀಪ್ ಅವರಿಗೆ ಹೋಲಿಸಿ, ಸುದೀಪ್ ಚಿರುಯುವಕನಂತೆ ಕಾಣ್ತಿದ್ದಾರೆ ಎಂಬರ್ಥದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಂಟರ್‌ಟೈನ್‌ಮೆಂಟ್ ಪ್ಯಾಕೇಜ್

ಕೋಟಿಗೊಬ್ಬ 2 ಚಿತ್ರದ ಸೀಕ್ವೆಲ್ ಇದಾಗಿದ್ದು, ಆ ಚಿತ್ರದಂತೆ ಈ ಚಿತ್ರವೂ ಭರಪೂರ ಮನರಂಜನೆಯಿಂದ ಕೂಡಿದೆ ಎನ್ನುವುದಕ್ಕೆ ಈ ಟ್ರೈಲರ್ ಸಾಕ್ಷಿಯಾಗಿದೆ. ಸತ್ಯ ಮತ್ತು ಶಿವನ ಪಾತ್ರ ಇಲ್ಲಿಯೂ ಮುಂದುವರಿದಿದ್ದು, ಈ ಸಲ ಸುದೀಪ್ ಮತ್ತಷ್ಟು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಕೋಟಿಗೊಬ್ಬ 3 ಟ್ರೈಲರ್‌ಗೆ ಒಳ್ಳೆಯ ರೆಸ್‌ಪಾನ್ಸ್ ಸಿಕ್ಕಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.
10 ರಂದು ಪ್ರಿ-ರಿಲೀಸ್ ಕಾರ್ಯಕ್ರಮ

ಅಕ್ಟೋಬರ್ 10 ರಂದು ಕೋಟಿಗೊಬ್ಬ 3 ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಂಜೆ ಆರು ಗಂಟೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಈ ಕಾರ್ಯಕ್ರಮಕ್ಕೆ ಯಾರಾದರೂ ಅತಿಥಿಗಳು ಭಾಗಿಯಾಗ್ತಾರಾ ಎನ್ನುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಅದೇ ದಿನ ದುನಿಯಾ ವಿಜಯ್ ನಟನೆಯ ಸಲಗ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಸಹ ನಡೆಯಲಿದೆ.
ದಸರಾ ಹಬ್ಬಕ್ಕೆ ಸುದೀಪ್ ದರ್ಶನ

ದಸರಾ ಹಬ್ಬದ ವಿಶೇಷವಾಗಿ ಅಕ್ಟೋಬರ್ 14 ರಂದು ಕೋಟಿಗೊಬ್ಬ 3 ತೆರೆಗೆ ಬರ್ತಿದೆ. ಕೋಟಿಗೊಬ್ಬ 3 ಚಿತ್ರದಲ್ಲಿ ಸುದೀಪ್‌ಗೆ ನಾಯಕಿಯಾಗಿ ಮಲಯಾಳಂ ನಟಿ ಮಡೋನ್ನಾ ಸಬಾಸ್ಟಿಯನ್ ನಟಿಸಿದ್ದಾರೆ. ರವಿಶಂಕರ್, ಅಫ್ತಾಬ್ ಶಿವ ದಾಸನಿ, ಶ್ರದ್ಧಾ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸೂರಪ್ಪ ಬಾಬು ಬಂಡವಾಳ ಹಾಕಿದ್ದಾರೆ. ಅದೇ ದಿನ ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಲಗ ಚಿತ್ರ ಬಿಡುಗಡೆಯಾಗುತ್ತಿದೆ. ದುನಿಯಾ ವಿಜಯ್ ಜೊತೆ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಜನಾ ಪ್ರಕಾಶ್ ನಾಯಕಿ. ಕಾಕ್ರೋಚ್ ಖ್ಯಾತಿಯ ಸುಧೀ, ಯಶ್ ಶೆಟ್ಟಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಕೆಪಿ ಶ್ರೀಕಾಂತ್ ನಿರ್ಮಿಸಿದ್ದಾರೆ.
ಆರ್ಯನ್ ಖಾನ್‌ಗೆ ರಮ್ಯಾ ಪ್ರಶ್ನೆ

ಶಾರೂಖ್ ಖಾನ್ ಪುತ್ರನ ಬಂಧನ ಪ್ರಕರಣ ಕುರಿತು ರಮ್ಯಾ ಪ್ರತಿಕ್ರಿಯಿಸಿ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ‘ಎನ್‌ಸಿಬಿಯು ಆರ್ಯನ್ ಖಾನ್ ಅನ್ನು ಡ್ರಗ್ಸ್ ಇರಿಸಿಕೊಂಡಿದ್ದಕ್ಕಾಗಲಿ, ಸೇವಿಸಿದ್ದಕ್ಕಾಗಲಿ ಬಂಧಿಸಿಲ್ಲ. ಬದಲಿಗೆ ಕೇವಲ ಪ್ರಶ್ನೆ ಮಾಡಲು ಬಂಧಿಸಿದೆ. ಮತ್ತೊಂದೆಡೆ ಬಿಜೆಪಿ ಕೇಂದ್ರ ಮಂತ್ರಿಯ ಮಗ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಕಾರು ಹತ್ತಿಸಿ ನಾಲ್ಕು ರೈತರನ್ನು ಕೊಂದಿದ್ದಾನೆ. ಆದರೆ ಆತನನ್ನು ಈವರೆಗೆ ಬಂಧಿಸಲಾಗಿಲ್ಲ ಏಕೆ?’ ಎಂದಿದ್ದರು. ”ಎನ್‌ಸಿಬಿಯು ಆರ್ಯನ್ ಖಾನ್ ಅನ್ನು ವಶಕ್ಕೆ ಪಡೆಯಬೇಕಾದರೆ ಆತನ ಬಳಿ ಡ್ರಗ್ಸ್ ಸಿಕ್ಕಿಲ್ಲ, ಆತ ಡ್ರಗ್ಸ್ ಸೇವಿಸಿದ್ದಾಗಿ ಸಾಕ್ಷಿಯೂ ಇಲ್ಲ ಆದರೂ ಆತನನ್ನು ಬಂಧಿಸಿ ಆತನ ಮೇಲೆ ಸೆಕ್ಷನ್‌ಗಳನ್ನು ಹೊರಿಸಲಾಗಿದೆ” ಎಂದು ಟ್ವೀಟ್ ಮಾಡಿದ್ದರು.