ದಕ್ಷಿಣ ಕನ್ನಡ: ಕಾಲೇಜು ಫೀಸ್ ಕಟ್ಟುವ ವಿಚಾರಕ್ಕೆ ನೊಂದು ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ್ದ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಇಂದು ಮೃತಪಟ್ಟಿದ್ದಾಳೆ. ಕೇರಳದ ಕಣ್ಣೂರು ಜಿಲ್ಲೆಯ ಚೆರುಪ್ಪುಳ ನಿವಾಸಿ ನೀನಾ (21) ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾಳೆ.
ಮಂಗಳೂರಿನ ಕೊಲಾಸೋ ನರ್ಸಿಂಗ್ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿನಿಯಾಗಿದ್ದ ನೀನಾ ನಿನ್ನೆ ಸಂಜೆ ಹಾಸ್ಟೆಲ್ನ ಬಾತ್ ರೂಂ ನಲ್ಲಿ ಅತ್ಮಹತ್ಯೆಗೆ ಯತ್ನಿಸಿದ್ದಳು. ಅದನ್ನು ಗಮನಿಸಿದ ಹಾಸ್ಟೆಲ್ ಸಹ ವಿದ್ಯಾರ್ಥಿನಿಯರು ಗಂಭೀರ ಪರಿಸ್ಥಿತಿಯಲ್ಲಿದ್ದ ನೀನಾಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಇಂದು ಕೊನೆಯುಸಿರೆಳೆದಿದ್ದಾಳೆ.
ತಾಯಿಗೆ ಕಾಲೇಜು ಫೀಸ್ ಹೊರೆಯಾಗಬಹುದೆಂದು ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಕುರಿತು ತನ್ನ ಡೈರಿಯಲ್ಲಿ ನೀನಾ ಬರೆದು ಕೊಂಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹಾಸ್ಟೆಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.