ಇಂಜಿನ್ ಹೋದ ಮೇಲೆ ಕಾಂಗ್ರೆಸ್‍ನಲ್ಲಿ ಎಲ್ಲಾ ಗುಂಪುಗಾರಿಕೆ ಹೋಗಿ ಬಿಟ್ಟಿದೆ. ನಮ್ಮಲ್ಲಿ ಇಂಜಿನ್ ಈಗ ಇಲ್ಲ. ಈಗ ಬಿಜೆಪಿಯಲ್ಲಿದೆ, ಅಲ್ಲಿ ಏನು ಆಗುತ್ತೆ ಹೇಳುವುದಕ್ಕೆ ಬರುವುದಿಲ್ಲ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪರೋಕ್ಷವಾಗಿ ಲೇವಡಿ ಮಾಡಿದರು.ಕಾಂಗ್ರೆಸ್‍ನಲ್ಲಿನ ಗುಂಪುಗಾರಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಬುಧವಾರ ಬೆಳಗಾವಿಯಲ್ಲಿ ಉತ್ತರಿಸಿದ ಸತೀಶ ಜಾರಕಿಹೊಳಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವು ಗುಂಪುಗಾರಿಕೆಯಿಂದ ಸೋತಿದ್ದು ನಿಜ.
ಆದರೆ ಇದು ಬಹಳ ದೊಡ್ಡ ಜಿಲ್ಲೆ ಆಗಿರುವುದರಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಗುಂಪುಗಾರಿಕೆ ಆಗುವುದಿಲ್ಲ. ಗುಂಪುಗಾರಿಕೆ ಮಾಡುವವರು ನಮ್ಮ ಪಕ್ಷದಲ್ಲಿ ಈಗ ಇಲ್ಲ. ಸೋಲಿಸುವ ಟೀಂ ಹೊರಗೆ ಹೋಗಿದೆ. ಹೀಗಾಗಿ ನಾವು ಈಗ ಆರಾಮ ಇದ್ದೇವೆ. ನಮಗೆ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ.
ಇಂಜಿನ್ ಹೋದ್ರೆ ಡಬ್ಬಿಗಳು ಏನೂ ಮಾಡುವುದಕ್ಕೆ ಆಗುವುದಿಲ್ಲ. ನಮ್ಮಲ್ಲಿ ಡಬ್ಬಿಗಳು ಇವೆ, ಆದರೆ ಡಬ್ಬಿಗಳು ಓಡಲು ಆಗುವುದಿಲ್ಲ ಎಂದು ರಮೇಶ ಜಾರಕಿಹೊಳಿ ಹೆಸರು ಹೇಳದೇ ಟಾಂಗ್ ಕೊಟ್ಟರು.ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಸತೀಶ ಜಾರಕಿಹೊಳಿ ಈಗಾಗಲೇ ಐದಾರು ಜನರು ಟಿಕೇಟ್‍ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಅರ್ಜಿಗಳು ಬರುತ್ತಿವೆ. ಕಾಂಗ್ರೆಸ್ ಪಕ್ಷಕ್ಕೆ ಪಂಚಾಯತಿಗಳಲ್ಲಿ ಅದರದ್ದೇಯಾದ ವೋಟ್ ಬ್ಯಾಂಕ್ ಇದೆ. ಹೀಗಾಗಿ ಆಧಾರದ ಮೇಲೆ ಚುನಾವಣೆ ನಡೆಸುತ್ತೇವೆ. ಒಂದೇ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇವೆ. ಒಂದು ಸ್ಥಾನ ಗೆಲ್ಲಲು ಮಾತ್ರ ನಮಗೆ ಶಕ್ತಿ ಹೊಂದಿದ್ದೇವೆ ಎಂದರು.ಇನ್ನು ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಖಾಯಂ ಕ್ಯಾಂಡಿಡೇಟ್ ನಾನೇ, ಗೆಲ್ಲೋವರೆಗೂ ನಾನೇ ಖಾಯಂ ಕ್ಯಾಂಡಿಡೇಟ್. ಆದರೆ ಯಾವಾಗ ಗೆಲ್ಲುತ್ತಿವೋ ಗೊತ್ತಿಲ್ಲ.
ಇನ್ನು ಯಮಕನಮರಡಿ ಕ್ಷೇತ್ರದಿಂದ ರಾಹುಲ್ ಸ್ಪರ್ಧಿಸುತ್ತಾರಾ ಅಥವಾ ಪ್ರಿಯಾಂಕಾ ಸ್ಪರ್ಧಿಸುತ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಯಿಸಿದ ಸತೀಶ ಜಾರಕಿಹೊಳಿ ಜನ ಯಾರನ್ನು ಬಯಸುತ್ತಾರೋ ನೋಡೋಣ. ಇದಕ್ಕೆ ನಮ್ಮ ಅಭಿಪ್ರಾಯ ಮುಖ್ಯ ಆಗುವುದಿಲ್ಲ. ಸಾರ್ವಜನಿಕರ ಅಭಿಪ್ರಾಯ ಬಹಳ ಮುಖ್ಯವಾಗುತ್ತದೆ. ಇನ್ನು ಎರಡು ವರ್ಷ ಸಮಯವಿದೆ. ಮೊದಲು ಎಂಎಲ್‍ಎ ಆಗಿ, ಆಮೇಲೆ ಎಂಪಿ ತಯಾರಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.