ಸಾಗರ: ಇಲ್ಲಿನ ನೆಹರೂ ಮೈದಾನದ ಸಂತ ಜೋಸೆಫ್ ಇಂಗ್ಲೀಷ್ ಕಾನ್ವೆಂಟ್ ಎದುರಿನ ಧ್ವಜಸ್ತಂಭಕ್ಕೆ ಗುರುವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ.
ರಾಷ್ಟ್ರಧ್ವಜ ಸ್ತಂಭವನ್ನು ಪ್ರತಿಸಾರಿ ನಡೆಯುವ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಉಪಯೋಗಿಸಿಕೊಳ್ಳುತ್ತಿತ್ತು. ನಂತರ ಅದನ್ನು ಪ್ಲಾಸ್ಟಿಕ್ ಚೀಲದಿಂದ ಭದ್ರವಾಗಿ ಕಟ್ಟಿ ಇರಿಸಲಾಗುತಿತ್ತು.
ದುಷ್ಕರ್ಮಿಗಳು ಗುರುವಾರ ರಾತ್ರಿ ರಾಷ್ಟ್ರಧ್ವಜ ಸ್ತಂಭಕ್ಕೆ ಬೆಂಕಿ ಹಚ್ಚಿದ್ದರಿಂದ ಮೇಲ್ಭಾಗದ ಪ್ಲಾಸ್ಟಿಕ್ ಕಂಬ ಸುಟ್ಟು ಕರಕಲಾಗಿದೆ. ಧ್ವಜಸ್ತಂಭದ ಅಕ್ಕಪಕ್ಕ ಬಾಟಲಿಯನ್ನು ಒಡೆದಿದ್ದು, ದುಷ್ಕರ್ಮಿಗಳು ಕುಡಿದ ಅಮಲಿನಲ್ಲಿ ಈ ಕೃತ್ಯ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಶಾಲಾ ಆಡಳಿತ ಮಂಡಳಿಯ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.