Breaking News

ಸಚಿವರಾಗಿ ಜಗದೀಶ್ ಶೆಟ್ಟರ್ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಕೈಗಾರಿಕಾ ಸಚಿವ ನಿರಾಣಿ ತಡೆ?

Spread the love

ಬೆಂಗಳೂರು, ಆ. 14: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ನಾನು ಮಂತ್ರಿಯಾಗುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜ್ಯ ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಹೇಳಿದ್ದರು. ಅದರಂತೆ ಅವರು ಮಂತ್ರಿಯಾಗಲಿಲ್ಲ. ಅದಾದ ಬಳಿಕ ಬಹಳಷ್ಟು ಬೆಳವಣಿಗೆಗಳು ರಾಜ್ಯ ಬಿಜೆಪಿ ಸರ್ಕಾರದಲ್ಲಿ ಆಗುತ್ತಿವೆ. ಕೈಗಾರಿಕಾ ಸಚಿವರಾಗಿ ಜಗದೀಶ್ ಶೆಟ್ಟರ್ ತೆಗೆದುಕೊಂಡಿದ್ದ ನಿರ್ಧಾರಕ್ಕೆ ನೂತನ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಬ್ರೇಕ್ ಹಾಕಿದ್ದಾರೆ ಎಂಬ ಮಾಹಿತಿ ಬಂದಿದೆ.

ಇದೇ ಸಂದರ್ಭದಲ್ಲಿ ಅತ್ಯಂತ ಮಹತ್ವದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮುಂದೂಡುವ ಮುನ್ಸೂಚನೆ ಸಿಕ್ಕಿದೆ. ಹಿಂದೆ ಜಗದೀಶ್ ಶೆಟ್ಟರ್ ಅವರು ಬೃಹತ್ ಕೈಗಾರಿಕಾ ಸಚಿವರಾಗಿದ್ದಾಗ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ತೀರ್ಮಾನ ಮಾಡಲಾಗಿತ್ತು. ಈಗ ಮುರುಗೇಶ್ ನಿರಾಣಿ ಬೃಹತ್ ಕೈಗಾರಿಕಾ ಸಚಿವರಾಗಿದ್ದು, ನಿಗದಿಯಂತೆ ಹೂಡಿಕೆದಾರರ ಸಮಾವೇಶ ನಡೆಯುವುದು ಅನುಮಾನವಾಗಿದೆ.

ಜೊತೆಗೆ ಬಂಡವಾಳ ಹೂಡಿಕೆದಾರರಲ್ಲಿ ಯಾರಿಗೆ ಮೊದಲ ಆದ್ಯತೆಯನ್ನು ಕೊಡಬೇಕು ಎಂಬುದನ್ನೂ ಸಚಿವ ಮುರುಗೇಶ್ ನಿರಾಣಿ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಬೃಹತ್ ಕೈಗಾರಿಕಾ ಇಲಾಖೆ ರಾಜ್ಯದ ಅಭಿವೃದ್ಧಿಗೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಅಧಿಕಾರಿಗಳು ಯಾವುದೇ ಯೋಜನೆ ಆಗುವುದಿಲ್ಲ ಎಂದು ಅದಕ್ಕೆ ಹಲವು ಕಾರಣಗಳನ್ನುಕೊಡುವುದನ್ನು ಸಹಿಸುವುದಿಲ್ಲ. ಸಬೂಬು ಹೇಳುವುದನ್ನು ಬಿಟ್ಟು ಅಧಿಕಾರಿಗಳು ಕೆಲಸ ಮಾಡಬೇಕು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಎಚ್ಚರಿಸಿದ್ದಾರೆ.

ಹೂಡಿಕೆದಾರರ ಸಮಾವೇಶ ಮುಂದೂಡಿಕೆ?

ಮುಂಬರುವ ಫೆಬ್ರವರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದ ಬಹುನಿರೀಕ್ಷಿತ ಬಂಡವಾಳದಾರರ ಸಮಾವೇಶ ಮುಂದೂಡುವ ಮುನ್ಸೂಚನೆಯನ್ನು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೊಟ್ಟಿದ್ದಾರೆ. 2022ರ ಫೆಬ್ರವರಿ 9, 10 ಹಾಗೂ 11 ರಂದು ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತೀಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲು ತೀರ್ಮಾನಿಸಲಾಗಿತ್ತು. ಜೊತೆಗೆ ರಾಜ್ಯದ ಮೂರು ಕಡೆಗಳಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲೂ ಜಗದೀಶ್ ಶೆಟ್ಟರ್ ಕೈಗಾರಿಕಾ ಸಚಿವರಾಗಿದ್ದಾಗ ತೆಗೆದುಕೊಳ್ಳಲಾಗಿತ್ತು. ಆದರೆ ಈಗ ಇಲಾಖೆಯ ಸಚಿವರು ಬದಲಾಗಿದ್ದು, ಮುರುಗೇಶ್ ನಿರಾಣಿ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ ಹೂಡಿಕೆದಾರರ ಸಮಾವೇಶ ಮುಂದೂಡುತ್ತಿರುವುದು ಕುತೂಹಲ ಮೂಡಿಸಿದೆ. ಸಮಾವೇಶ ಮುಂದೂಡಲು ಇರುವ ಕಾರಣಗಳನ್ನು ಸಚಿವ ಮುರುಗೇಶ್ ನಿರಾಣಿ ಕೊಟ್ಟಿದ್ದಾರೆ.

ಯಾವ ಕಾರಣಕ್ಕೆ ಸಮಾವೇಶ ಮುಂದೂಡಿಕೆ?

 

ಹೂಡಿಕೆದಾರರ ಸಮಾವೇಶಕ್ಕೆ ಕೋವಿಡ್ ಕಾರಣವನ್ನು ಸಚಿವ ಮುರುಗೇಶ್ ನಿರಾಣಿ ಕೊಟ್ಟಿದ್ದಾರೆ. “ಈಗಾಗಲೇ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬರುವ ಫೆಬ್ರವರಿ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಮುಂದಿನ ಆರು ತಿಂಗಳ ಅವಧಿಯಲ್ಲಿ ಯಶಸ್ವಿಯಾಗಿ ಸಮಾವೇಶವನ್ನು ಮಾಡಲು ಆಗುತ್ತದೆಯೋ? ಇಲ್ಲವೋ? ಎಂಬ ಅನುಮಾನವಿದೆ. ಈ ಕುರಿತು ಸದ್ಯದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ. ಹೀಗಾಗಿ ಬರುವ ಫೆಬ್ರವರಿಯಲ್ಲಿ ನಡೆಯಬೇಕಾಗಿದ್ದ ಹೂಡಿಕೆದಾರರ ಸಮಾವೇಶ ಮುಂದೂಡುವುದು ಖಚಿತವಾಗಿದೆ.

ಆಗ ಅಪಾರವಾದ ಬಂಡವಾಳ ಹರಿದು ಬಂದಿತ್ತು

 

2008 ಮತ್ತು 2013ರಲ್ಲಿ ಇಡೀ ಜಗತ್ತು ಕರ್ನಾಟಕದತ್ತ ನೋಡುವಂತೆ ಕೈಗಾರಿಕೆಯನ್ನು ನಿರ್ವಹಣೆ ಮಾಡಿದ್ದೆವು. ಆಗ ಮಾಡಲಾಗಿದ್ದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅಪಾರವಾದ ಬಂಡವಾಳ ಹರಿದು ಬಂದಿತ್ತು. ಹೀಗಾಗಿ ನಮಗೆ ಉಳಿದಿರುವ 20 ತಿಂಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡುತ್ತೇವೆ. ಗುಡಿ ಕೈಗಾರಿಕೆಯಿಂದ ಬೃಹತ್ ಕೈಗಾರಿಕೆವರೆಗೆ ಹೆಚ್ಚು ಆದ್ಯತೆ ಕೊಡಲಾಗುತ್ತದೆ. ಪ್ರಧಾನಿ ಮೋದಿ ಅವರು ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡಿದ್ದಾರೆ. ಅದೇ ನಿಟ್ಟಿನಲ್ಲಿ ನಾವು ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಮೊದಲ ಸಂಪುಟ ಸಭೆ ಬಳಿಕ ಸಿಎಂ ಬೊಮ್ಮಾಯಿ ಕೂಡ ಹೇಳಿದ್ದರು!

 

ಫೆಬ್ರವರಿ ತಿಂಗಳಿನಲ್ಲಿ ಬಂಡವಾಳ ಹೂಡಿಕೆದಾರರ ಅಮಾವೇಶವನ್ನು ನಡೆಸಲು ಕಳೆದ ಜುಲೈ 15 ರಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ನಡೆದಿದ್ದ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು. ಅದಕ್ಕೂ ಮೊದಲು ಜಗದೀಶ್ ಶೆಟ್ಟರ್ ಟೈರ್ 2 ಹಾಗೂ ಟೈರ್ 3 ನಗರಗಳಲ್ಲಿ ಕೈಗಾರಿಕೆ ಆರಂಭಿಸಲು ಹೆಚ್ಚು ಉತ್ತೇಜನ ಕೊಡಲು ತೀರ್ಮಾನಿಸಿದ್ದರು. ಅದಕ್ಕೆ ಪೂರ್ವಭಾವಿಯಾಗಿ ಹಲವು ಸಭೆಗಳನ್ನು ಮಾಡಿದ್ದರು. ರಾಜ್ಯದಾದ್ಯಂತ ಕೈಗಾರಿಕೆ ಸ್ಥಾಪನೆ ಹಿನ್ನೆಲೆಯಲ್ಲಿ ಬೆಂಗಳೂರು ಜೊತೆಗೆ ರಾಜ್ಯದ ಮೂರು ಕಡೆಗಳಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲು ಮಾಜಿ ಸಚಿವ ಜಗದೀಶ್ ಶೆಟ್ಟರ್ ತೀರ್ಮಾನಿಸಿದ್ದರು.

ಬೆಂಗಳೂರಿನ ಅರಮನೆ ಮೈದಾನ ಸೇರಿದಂತೆ ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು ಹಾಗೂ ಮೈಸೂರು ಭಾಗದಲ್ಲಿ ಹೂಡಿಕೆದಾರರ ಸಮಾವೇಶ ನಡೆಸಲು ತೀರ್ಮಾನ ಮಾಡಿದ್ದರು. ಬೆಂಗಳೂರು ಜೊತೆಗೆ ಮೂರು ಕಡೆಗಳಲ್ಲಿ ಸಮಾವೇಶ ನಡೆಸುವುದು ಹಿಂದಿನ ಸರ್ಕಾರದ ಉದ್ದೇಶವಾಗಿತ್ತು. ಹೂಡಿಕೆದಾರರ ಬೇಡಿಕೆ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಇದೀಗ ಮತ್ತೆ ಬೆಂಗಳೂರಿನಲ್ಲಿಯೇ ಕೈಗಾರಿಕೆ ಸ್ಥಾಪನೆಗೆ ಸರ್ಕಾರ ಒತ್ತು ಕೊಡುತ್ತದೆಯಾ? ಎಂಬ ಸಂಶಯ ಜನರನ್ನು ಕಾಡುತ್ತಿದೆ. ಹೀಗಾಗಿ ಸರ್ಕಾರ ಏನು ತೀರ್ಮಾನ ಮಾಡುತ್ತದೆ? ಎಂಬುದನ್ನು ಉದ್ಯೋಗ ಅರಸುತ್ತಿರುವ ಜನರು ಎದುರು ನೋಡುತ್ತಿದ್ದಾರೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ