ಬೆಂಗಳೂರು: ಇದೀಗ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಸಿಡಿ ಭೀತಿ ಶುರುವಾಗಿದೆ.
ಆದ್ದರಿಂದ ತಮ್ಮ ವಿರುದ್ಧ ಯಾವುದಾದರೂ ಸಿಡಿಗಳು ಇದ್ದರೆ ಅದು ಎಲ್ಲಿಯೂ ಪ್ರಸಾರವಾಗಬಾರದು ಎಂದು ಕೋರಿ ಬೆಂಗಳೂರಿನ ಸಿವಿಲ್ ಕೋರ್ಟ್ ಮೊರೆ ಹೋಗಿದ್ದಾರೆ. ಇಂದು ಇದರ ವಿಚಾರಣೆ ನಡೆಸಿರುವ ಕೋರ್ಟ್, ಸಿಡಿಯನ್ನು ಎಲ್ಲಿಯೂ ಪ್ರಸಾರ ಮಾಡಬಾರದು ಎಂದು ತಡೆಯಾಜ್ಞೆ ನೀಡಿದೆ.
ಸಿಡಿಯ ಕುರಿತಂತೆ ಮಾತನಾಡಿರುವ ರೇಣುಕಾಚಾರ್ಯ ಅವರು, ಈಗೀಗ ತಂತ್ರಜ್ಞಾನ ಹೇಗಿದೆ ಎಂದರೆ, ಯಾರದ್ದೋ ತಲೆ, ಯಾರದ್ದೋ ಮುಖ, ಯಾರದ್ದೋ ಕತ್ತು ಇನ್ನಾರದ್ದೋ ಷರ್ಟು, ಪ್ಯಾಂಟು ಹಾಕಿ ಸಿಡಿ ಮಾಡಿ ಪ್ರಸಾರ ಮಾಡುತ್ತಾರೆ. ಆದರೆ ನಾನು ಹೇಗೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ದುರುದ್ದೇಶದಿಂದ ಯಾರಾದರೂ ಸಿಡಿ ತಯಾರು ಮಾಡಿರುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.