Breaking News

ಕುದರೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವಂತೆ ಆಗ್ರಹ

Spread the love

ಸಾಗರ: ತಾಲ್ಲೂಕಿನ ಕುದರೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಲು ಅಗತ್ಯವಿರುವ ವ್ಯವಸ್ಥೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಕುದರೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇರುವ ಕಾರಣ ಬುಧವಾರ ಜಿಯೋ ಕಂಪೆನಿ ಪ್ರತಿನಿಧಿಗಳೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಮಾತನಾಡಿದರು.

ನಾಡಿಗೆ ಬೆಳಕು ನೀಡಲು ಜಲ ವಿದ್ಯುತ್ ಯೋಜನೆಗಾಗಿ ಈ ಭಾಗದ ಜನರು ತಮ್ಮ ಬದುಕನ್ನೆ ತ್ಯಾಗ ಮಾಡಿದ್ದಾರೆ. ಇಂತಹ ಜನರಿಗೆ ಮೂಲ ಸೌಕರ್ಯ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಡಿಜಿಟಲ್ ತಂತ್ರಜ್ಞಾನದ ಈ ಯುಗದಲ್ಲಿ ಗ್ರಾಮೀಣ ಜನರು ಮೊಬೈಲ್ ನೆಟ್‌ವರ್ಕ್ ಸೌಲಭ್ಯದಿಂದ ವಂಚಿತರಾಗಿರುವುದು ದುರ್ದೈವದ ಸಂಗತಿ ಎಂದರು.

‘ಕರೂರು- ಭಾರಂಗಿ ಹೋಬಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಡ್ಡ ಬೆಟ್ಟಗಳಿವೆ. ವಿದ್ಯುತ್ ಸರಬರಾಜಿನಲ್ಲೂ ಆಗಾಗ ವ್ಯತ್ಯಯ ಉಂಟಾಗುತ್ತದೆ. ಇದೂ ಸೇರಿ ಹಲವು ತಾಂತ್ರಿಕ ಕಾರಣಗಳಿಗೆ ಖಾಸಗಿ ಮೊಬೈಲ್ ಕಂಪನಿಗಳು ಇಲ್ಲಿ ಟವರ್ ನಿರ್ಮಿಸಲು ಹಿಂದೇಟು ಹಾಕುತ್ತಿವೆ. ಸ್ಥಳ ಪರಿಶೀಲನೆ ನಡೆಸಿ ಟವರ್ ನಿರ್ಮಿಸುವ ಬಗ್ಗೆ ಆಸಕ್ತಿ ವಹಿಸಲು ಜಿಯೋ ಕಂಪೆನಿ ಪ್ರತಿನಿಧಿಗಳನ್ನು ಈ ಭಾಗದ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದೇವೆ’ ಎಂದು ಅವರು ಹೇಳಿದರು.

‘ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಇಲ್ಲ ಎನ್ನುವ ಕಾರಣಕ್ಕೆ ಈ ಭಾಗದ ಜನರು ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿ ‘ನೋ ನೆಟ್‌ವರ್ಕ್- ನೋ ವೋಟಿಂಗ್’ ಅಭಿಯಾನ ನಡೆಸುತ್ತಿದ್ದಾರೆ. ಚುನಾವಣೆ ಬಹಿಷ್ಕರಿಸದಂತೆ ಜನರಿಗೆ ಅವರು ಕೇಳುತ್ತಿರುವ ಸೌಲಭ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ’ ಎಂದರು.

ತುಮರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ, ಕರೂರು- ಭಾರಂಗಿ ಹೋಬಳಿಯ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 12ರಿಂದ 15 ಸಣ್ಣ ಹಾಗೂ ದೊಡ್ಡ ಗಾತ್ರದ ಟವರ್ ನಿರ್ಮಿಸಿದರೆ ಈ ಪ್ರದೇಶದ ಶೇ 90ರಷ್ಟು ಭೂ ಭಾಗಕ್ಕೆ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಬಹುದು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ್ ಗಂಟೆ, ಮಾಜಿ ಸದಸ್ಯೆ ಸವಿತಾ ದೇವರಾಜ್, ದೇವರಾಜ ಕಪ್ಪದೂರು, ಓಂಕಾರ್ ಜೈನ್, ಗಣೇಶ್, ಡಿ.ದಿನೇಶ್ ಇದ್ದರು.


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ