ವಿಜಯನಗರ: ಜಿಲ್ಲೆಯಾದ್ಯಂತ ನಿನ್ನೆ ಭರ್ಜರಿ ಮಳೆಯಾಗಿದ್ದು ಅಪಾರ ಹಾನಿಯಾಗಿದೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿ ಸಂಪೂರ್ಣ ಜಲಾವೃತಗೊಂಡಿದ್ದು ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟು ಮಾಡಿದೆ.
ಅವೈಜ್ಞಾನಿಕ ಕೃಷಿ ಹೊಂಡದಿಂದಲೇ ಬೆಳೆ ನಾಶ
ಬಿಟ್ಟು ಬಿಡದೇ ಸುರಿದ ಮಳೆಯಿಂದ ಜಾತಪ್ಪ ಎಂಬ ರೈತನ ಜಮೀನು ಜಲಾವೃತಗೊಂಡಿದ್ದು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಪಪ್ಪಾಯಿ, ದಾಳಿಂಬೆ ಗಿಡಗಳು ನೆಲಕಚ್ಚಿ ರೈತನನ್ನು ಸಂಕಷ್ಟಕ್ಕೆ ತಳ್ಳಿದೆ. ಜಮೀನಿನಲ್ಲಿ ನಿರ್ಮಿಸಿದ ಕೃಷಿ ಹೊಂಡದಿಂದ ನೀರು ನುಗ್ಗಿದ್ದು, ಈ ಅವೈಜ್ಞಾನಿಕ ಕೃಷಿ ಹೊಂಡದಿಂದಲೇ ನಮ್ಮ ಬೆಳೆ ನಾಶವಾಗಿದೆ ಎಂದು ರೈತ ಕೃಷಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾನೆ.
ಬೆಳೆ ನೋಡಿ ಪ್ರಾಣವನ್ನ ಹೇಗೆ ಇಟ್ಟುಕೊಳ್ಳಬೇಕು. ಬಡವ ಸ್ವಾಮಿ ನಾನು.. ಇಷ್ಟೊಂದು ಮಳೆ ನೀರು ನುಗ್ಗಿದ್ರೆ ಯಾವ ಬೆಳೆ ತಡೆಯುತ್ತೆ? ಏನಾದರೂ ಕೇಳಿದ್ರೆ ದೌರ್ಜನ್ಯ ಮಾಡ್ತಿದ್ದಾರೆ ಅಂತಾರೆ ಎಂದು ಕೃಷಿ ಅಧಿಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ
ಹೂವಿನ ಹಡಗಲಿಯ ಕೆಇಬಿ ಕಾಲೋನಿಗೆ ನುಗ್ಗಿದ ನೀರು ಮನೆಗಳಿಗೆ ನುಗ್ಗಿದೆ. ಇತ್ತ ನೀರು ಹೊರ ಹಾಕಲು ಆಗದೇ ನಿದ್ದೆಯೂ ಮಾಡಲು ಬಿಡದೇ ತೀವ್ರ ಫಜೀತಿ ಸೃಷ್ಟಿಸಿದೆ. ಮಳೆ ನೀರಿನ ಜೊತೆ ಹಳ್ಳದ ನೀರು ಸೇರಿ ಈ ಅವಾಂತರ ಸೃಷ್ಟಿಸಿದ್ದು ನೌಕರರು ಮತ್ತು ಕುಟುಬ ಸದಸ್ಯರು ತಡರಾತ್ರಿ ವರೆಗೆ ಮನೆ ಹೊರಗೆ ಕಾಲ ಕಳೆದಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರೆಣೆ ನಡೆಸಿ ಮಳೆ ನೀರನ್ನು ಮನೆಯಿಂದ ಹೊರ ಹಾಕಿದ್ದಾರೆ.