ಬೆಂಗಳೂರು(ಏ.11): ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಮಂದಿಗೆ ಕೊರೋನಾ ಬಂದಿರುವುದರಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಹಾಗಾಗಿಯೇ ಬೆಂಗಳೂರನ್ನು ಕರ್ನಾಟಕದ ಕೊರೋನಾ ಹಾಟ್ಸ್ಪಾಟ್ ಎಂದು ಗುರುತಿಸಲಾಗಿದೆ. ಹೀಗಿರುವಾಗ ದಿನವಿಡೀ ಕೊವಿಡ್ 19 ಶಂಕಿತ ರೋಗಿಗಳಿಗೆ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿರುವ ಇಎಸ್‌ಐ(ಎಂಪ್ಲಾಯೀಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೊರೇಷನ್) ಆಸ್ಪತ್ರೆ ವೈದ್ಯರು ಮತ್ತು ನರ್ಸ್‌ಗಳು ಜೀವ ಭಯದಲ್ಲಿ ಬದುಕುತ್ತಿದ್ದಾರೆ. ತಮಗೂ ಕೊರೋನಾ ಬರುವ ಸಾಧ್ಯತೆಗಳಿದ್ದು, ಆಸ್ಪತ್ರೆಯಲ್ಲೇ ಕ್ವಾರಂಟೈನ್‌ನಲ್ಲಿರಲು ಅವಕಾಶ ಮಾಡಿಕೊಡಿ ಎಂದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಈಗಾಗಲೇ ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಎಸ್‌ಐ ಆಸ್ಪತ್ರೆಯಲ್ಲಿ ನೂರಾರು ಮಂದಿಯನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಇರುವುದು ಧೃಡಪಟ್ಟಿದೆ. ನಾವು ದಿನಿವಿಡೀ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಿದ ಬಳಿಕ ಮನೆಗಳಿಗೆ ಹೋಗುತ್ತಿದ್ದೇವೆ. ಇದರಿಂದ ನಮ್ಮ ಕುಟುಂಬಗಳಿಗೂ ಕೊರೋನಾ ಸೋಂಕು ತಗುಲುವ ಸಾಧ್ಯತೆ ಇದೆ. ಆದ್ದರಿಂದ ನಮಗೆ ಇಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡಿ ಎಂದು ಒತ್ತಾಯಿಸಿ ಇಎಸ್‌ಐ ಆಡಳಿತ ಮಂಡಳಿ ವಿರುದ್ಧ ವೈದ್ಯರು ಮತ್ತು ನರ್ಸ್‌ಗಳು ಬೀದಿಗಿಳಿದಿದ್ದಾರೆ.
ನಮಗೆ ಕಳಪೆ ಗುಣಮಟ್ಟದ ಮಾಸ್ಕ್ ಹಾಗೂ ಪಿಪಿಇ ಕಿಟ್ ನೀಡಲಾಗಿದೆ. ಈ ಕುರಿತಂತೆ ಇಎಸ್‌ಐ ಆಡಳಿತ ಮಂಡಳಿ ಗಮನಕ್ಕೂ ತಂದರೂ ಏನು ಪ್ರಯೋಜನವಾಗುತ್ತಿಲ್ಲ. ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆಯಾದರೂ ಯಾವುದೇ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡಿಲ್ಲ. ಪಿಪಿಇ ಕಿಟ್ ಕೂಡ ಸರಿಯಾಗಿಲ್ಲ. ನಿಗಾ ವಹಿಸುವ ಸಿಬ್ಬಂದಿಗಳು ಕೂಡ ಇಲ್ಲ. ಜತೆಗೆ ಹೆಲ್ತ್ ವಾರಿಯರ್ಸ್ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಲ್ಲ. ನಮ್ಮಲ್ಲಿ ಯಾರಿಗಾದರೂ ಪಾಸಿಟಿವ್ ಬಂದರೆ ಆಮೇಲೆ ನೋಡೋಣ ಎನ್ನುತ್ತಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತ್ತ ಯಾವುದೇ ಕಾರಣಕ್ಕೂ ಸಿಬ್ಬಂದಿ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಅವಕಾಶ ಇಲ್ಲ ಎಂದು ಆಡಳಿತ ಮಂಡಳಿ ಹೇಳುತ್ತಿದೆ. ಇತ್ತ ವೈದ್ಯರು ಹಾಗೂ ನರ್ಸ್‌ಗಳು ತಮ್ಮ ಪ್ರತಿಭಟನೆ ನಡೆಸುತ್ತಿದ್ದಾರೆ.