ಬೆಂಗಳೂರು: ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಅಬಕಾರಿ ಇಲಾಖೆ ಸಾಮಾನ್ಯ ದಿನಗಳಿಗಿಂತ ಶೇ.10 ರಷ್ಟು ಹೆಚ್ಚು ಲಾಭ ಗಳಿಸಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಶಾಸಕರ ಭವನದಲ್ಲಿ ಆಯೋಜನೆಗೊಂಡಿದ್ದ 18 ರಿಂದ 44 ವಯಸ್ಸಿನವರಿಗೆ 3 ದಿನಗಳ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಲಾಕ್ ಡೌನ್ ಆದ ಮೇಲೆ ಏಪ್ರಿಲ್ 1 ರಿಂದ ಜೂನ್ 15 ರವರೆಗೆ ಅಬಕಾರಿ ಇಲಾಖೆಗೆ 4500 ಕೋಟಿ ವರಮಾನ ಬಂದಿದ್ದು, ಸಾಮಾನ್ಯ ದಿನಗಳಿಗಿಂತ ಶೇ 10 ರಷ್ಟು ಹೆಚ್ಚು ಲಾಭ ಬಂದಂತಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಲಾಕ್ ಡೌನ್ ಸಡಿಲಿಕೆ ಬಗ್ಗೆ ಮುಖ್ಯಮಂತ್ರಿಗಳು ಹೇಳಿರುವಂತೆ ಕಾನೂನು ಇಡೀ ರಾಜ್ಯದಾದ್ಯಂತ ಜಾರಿಯಲ್ಲಿರುತ್ತದೆ ಎಂದು ಹೇಳಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಕೋವಿಡ್ ಲಸಿಕಾ ದಿನದ ಅಂಗವಾಗಿ ಇಂದು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ವ್ಯಾಪ್ತಿಯಲ್ಲಿ 3 ಸಾವಿರ ಮಂದಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ಹೇಳಿದರು.
ವಿಶ್ವ ಯೋಗ ದಿನವಾದ ಇಂದು ಪ್ರಧಾನಿ ಮೋದಿ ಪ್ರೇರಣೆ ಮೇರೆಗೆ 175 ಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದ ಸಚಿವರು ಯೋಗ ಮಾಡುವುದರಿಂದ ಕೋವಿಡ್ ನಂತಹ ಮಾರಕ ರೋಗಗಳನ್ನು ಹತ್ತಿಕ್ಕಲಾಗುವುದು ಎಂದು ಅಭಿಪ್ರಾಯಪಟ್ಟರು
Laxmi News 24×7