ಬೆಂಗಳೂರು, ಜೂನ್ 19: ರಾಜ್ಯದ ಹದಿನಾರು ಜಿಲ್ಲೆಗಳಲ್ಲಿ ಅನ್‌ಲಾಕ್ ಘೋಷಣೆಯಾಗುತ್ತಿದ್ದಂತೆ ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗಲು ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗಿದೆ.
ಜೂನ್ 21ರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಇಲಾಖೆ, ಒಳಾಡಳಿತ ಇಲಾಖೆ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಎಲ್ಲ ಸಿಬ್ಬಂದಿ ಸಂಪೂರ್ಣವಾಗಿ ಹಾಜರಾಗಲು ಆದೇಶಿಸಲಾಗಿದೆ.
ಉಳಿದ ಇಲಾಖೆಗಳ ಎಲ್ಲ ಗ್ರೂಪ್ ಎ ಅಧಿಕಾರಿಗಳು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ಉಳಿದಂತೆ ಗ್ರೂಪ್ ಬಿ, ಸಿ ಹಾಗೂ ಡಿ ಸಿಬ್ಬಂದಿ ಶೇಕಡಾ 50ರಂತೆ ರೋಟೇಶನ್ ಆಧಾರದ ಮೇಲೆ ಹಾಜರಾಗುವಂತೆ ತಿಳಿಸಲಾಗಿದೆ.
ದೃಷ್ಟಿಹೀನ, ದೈಹಿಕ ಅಂಗವೈಕಲ್ಯ, ಗರ್ಭಿಣಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ.
ಜೂನ್ 30ರವರೆಗೆ ಈ ಸುತ್ತೋಲೆ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಜೂನ್ 21ರಿಂದ ಎರಡನೇ ಹಂತದ ಅನ್‌ಲಾಕ್ ಆಗಲಿದ್ದು, ಕೊರೊನಾ ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ. 5ಕ್ಕಿಂತ ಕಡಿಮೆ ಇರುವ ಹದಿನಾರು ಜಿಲ್ಲೆಗಳಿಗೆ ಸಿಎಂ ಯಡಿಯೂರಪ್ಪ ಅನ್‌ಲಾಕ್ ಘೋಷಣೆ ಮಾಡಿದ್ದಾರೆ.ಶೇ.5% ಕ್ಕಿಂತ ಕಡಿಮೆ ಪಾಸಿಟಿವಿಟಿ ದರವಿರುವ ಹದಿನಾರು ಜಿಲ್ಲೆಗಳಲ್ಲಿ, ಅಂದರೆ ಉತ್ತರ ಕನ್ನಡ ಜಿಲ್ಲೆ, ಬೆಳಗಾವಿ, ಮಂಡ್ಯ, ತುಮಕೂರು, ಬಾಗಲಕೋಟೆ, ಕಲಬುರಗಿ, ಕೊಪ್ಪಳ, ಚಿಕ್ಕಬಳ್ಳಾಪುರ, ಗದಗ, ಬೆಂಗಳೂರು, ಕೋಲಾರ, ರಾಯಚೂರು, ಹಾವೇರಿ, ರಾಮನಗರ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಅನ್‌ಲಾಕ್ ಘೋಷಣೆ ಮಾಡಲಾಗಿದೆ. ಉಳಿದ ಹದಿಮೂರು ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರೆಯುವುದು. ಮೈಸೂರಿನಲ್ಲಿ ಲಾಕ್‌ಡೌನ್ ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.