ಬೆಂಗಳೂರು: ಸರಗಳ್ಳತನ ಆರೋಪದಲ್ಲಿ ವ್ಯಕ್ತಿಯನ್ನು ಅಕ್ರಮ ಬಂಧನದಲ್ಲಿ ಇರಿಸಲಾಗಿತ್ತು ಎಂಬ ಆರೋಪದ ಪ್ರಕರಣದಲ್ಲಿ ಏಳು ಪೊಲೀಸರ ವಿರುದ್ಧ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
‘ಮುಗ್ಧರನ್ನು ಅಕ್ರಮವಾಗಿ ಬಂಧಿಸುವುದು ಮತ್ತು ಅವರನ್ನು ಕ್ರೂರವಾಗಿ ನಡೆಸಿಕೊಳ್ಳುವುದು ಪೊಲೀಸ್ ಅಧಿಕಾರಿಗಳ ಕರ್ತವ್ಯದ ಭಾಗ ಎಂದು ಪರಿಗಣಿಸಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.
‘ಒಬ್ಬ ವ್ಯಕ್ತಿಯನ್ನು 24 ಗಂಟೆಗಳಿಗೂ ಹೆಚ್ಚು ಕಾಲ ಲಾಕಪ್‌ನಲ್ಲಿ ಇಟ್ಟುಕೊಳ್ಳಲು ಅವಕಾಶ ಇಲ್ಲ. ಅದು ಕರ್ತವ್ಯ ಲೋಪ ಆಗಲಿದೆ’ ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ಪೀಠ ಉಲ್ಲೇಖಿಸಿತು.ದೊಡ್ಡಬಳ್ಳಾಪುರ ನಿವಾಸಿ ಮನು ಅವರನ್ನು 2010ರ ಮೇ ತಿಂಗಳಿನಲ್ಲಿ ಪೊಲೀಸರು ಕರೆದೊಯ್ದು ಎರಡು ದಿನಗಳ ನಂತರ ಬಿಡುಗಡೆ ಮಾಡಿದ್ದರು. ಈ ಸಂಬಂಧ ಎಫ್‌ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ ನಂತರ ಮನು ಅವರ ತಂದೆ ಖಾಸಗಿ ದೂರು ದಾಖಲಿಸಿದ್ದರು. ‘ಮಗನನ್ನು ಪೊಲೀಸರು ಥಳಿಸಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಸಂಬಂಧ ಇಲ್ಲದಿದ್ದರೂ ಪ್ರಕರಣದಲ್ಲಿ ಸೇರಿಸಿ ಅವನ ಜೀವನ ಹಾಳು ಮಾಡಲು ಪ್ರಯತ್ನಿಸಿದ್ದಾರೆ’ ಎಂದು ಆರೋಪಿಸಿದ್ದರು.
Laxmi News 24×7