ಬೆಂಗಳೂರು: ಕೋವಿಡ್ ಎರಡನೇ ಅಲೆಯ ತೀವ್ರ ಅಬ್ಬರವನ್ನು ನಿಯಂತ್ರಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಮತ್ತೆ 14 ದಿನಗಳ ಕಾಲ ಲಾಕ್ ಡೌನ್ ನ್ನು ನಿನ್ನೆ ವಿಸ್ತರಿಸಿ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿತು.
ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮನೆಯ ಹತ್ತಿರದ ಅಂಗಡಿಗಳಿಗೆ, ಸ್ಥಳಗಳಿಗೆ ನಾಗರಿಕರಿಗೆ ಅಗತ್ಯ ಕೆಲಸಗಳಿಗೆ ಹೋಗಲು ಮಾತ್ರ ಸರ್ಕಾರ ಅವಕಾಶ ನೀಡಿದ್ದು ಅನಗತ್ಯವಾಗಿ ರಸ್ತೆಯಲ್ಲಿ ನಡೆದುಕೊಂಡು, ವಾಹನಗಳಲ್ಲಿ ಓಡಾಡುವವರನ್ನು ವಶಕ್ಕೆ ಪಡೆದು ಕೇಸು ದಾಖಲಿಸಿ ಎಂದು ಪೊಲೀಸರಿಗೆ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ.
ಸರ್ಕಾರದ ಕಠಿಣ ಲಾಕ್ ಡೌನ್ ನಿಯಮ ಇಂದಿನಿಂದಲೇ ಜೂನ್ 7ರವರೆಗೆ ಜಾರಿಯಲ್ಲಿರುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಸೇರಿದಂತೆ ರಾಜ್ಯಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಬೆಂಗಳೂರಿನ ಅಲ್ಲಲ್ಲಿ ಪೊಲೀಸರು ಕೇವಲ ಒಂದು ಗಂಟೆಯಲ್ಲಿ ಸುಮಾರು 50 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಾರಿ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳುವುದು ಮಾತ್ರವಲ್ಲದೆ ಕೇಸು ಕೂಡ ಹಾಕುತ್ತಿದ್ದಾರೆ.ರಾಜ್ಯ ಸರ್ಕಾರ ಬಿಗಿ ಕರ್ಫ್ಯೂ ಜಾರಿಗೊಳಿಸುವ ಸಂಪೂರ್ಣ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ. ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಕಠಿಣ ಕರ್ಫ್ಯೂ ನಿಯಮಗಳನ್ನು ಜಾರಿಗೊಳಿಸಬಹುದು ಎಂದು ಸರ್ಕಾರ ನಿನ್ನೆ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಿದೆ.