ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೊತೆಗೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಮತ್ತೆ 12 ಜನರನ್ನು ಕೊರೊನಾ ಸೋಂಕು ಬಲಿ ತೆಗೆದುಕೊಂಡಿದೆ. ಕಳೆದ 12 ಗಂಟೆಯಲ್ಲಿ 12 ಜನ ಮೃತಪಟ್ಟಿದ್ದಾರೆ. ಇದರಲ್ಲಿ ಒಬ್ಬರು ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಕೂಡಾ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಮೂರು ದಿನಗಳ ಹಿಂದೆ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಚೆಲುವಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಪ್ರತಿನಿತ್ಯ ಹತ್ತಾರು ಮಂದಿಯ ಸಾವನ್ನಪ್ಪುತ್ತಿರುವುದು ಜನರಲ್ಲಿ ಆತಂಕ ತಂದಿದೆ. ಕೊವಿಡ್ ಆಸ್ಪತ್ರೆ ಒಳಗೆ ಹೋದವರು ಹೆಣವಾಗಿ ಹೊರಗೆ ಬರುತ್ತಿದ್ದಾರೆ ಎಂದು ಪೋಷಕರು ಹೇಳುತ್ತಿದ್ದಾರೆ.
50ಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ
ಚಾಮರಾಜನಗರದಲ್ಲಿ 50ಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಕೊರೊನಾ ಭಯದಿಂದ ಪೊಲೀಸರು ತಪಾಸಣೆಗೆ ಮುಂದಾಗಿಲ್ಲ. ಚಾಮರಾಜನಗರ ವಿಭಾಗದಲ್ಲಿ ಇನ್ನೂ ಕಠಿಣ ನಿಯಮಗಳು ಜಾರಿಯಾಗಿಲ್ಲ. ಈ ಕಾರಣ ಎಂದಿನಂತೆ ವಾಹನಗಳು ಸಂಚಾರ ಆರಂಭಿಸಿವೆ. ಅನಾವಶ್ಯಕವಾಗಿ ಜನರು ಓಡಾಡುತ್ತಿದ್ದಾರೆ. ಆದರೆ ಕೊಳ್ಳೇಗಾಲ ವಿಭಾಗದಲ್ಲಿ ಕಟ್ಟು ನಿಟ್ಟಿನಲ್ಲಿ ಟಫ್ ರೂಲ್ಸ್ ಜಾರಿಯಾಗಿದೆ. ಈ ಕಾರಣ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ಅನಾಥವಾದ ಮಗು
ಮೊನ್ನೆಯಷ್ಟೇ ತಂದೆ ಕಳೆದು ಕೊಂಡಿದ್ದ ಮಗು ಇಂದು ತನ್ನ ತಾಯಿಯನ್ನು ಕಳೆದುಕೊಂಡು ಅನಾಥವಾಗಿದೆ. ಜಿಲ್ಲಾ ಕೊವಿಡ್ ಅಸ್ಪತ್ರೆಯಲ್ಲಿ ಮೊನ್ನೆ ತಂದೆ ಸಾವನ್ನಪ್ಪಿದ್ದರು. ಇಂದು ಬೆಳಗ್ಗೆ ತಾಯಿ ಮೃತಪಟ್ಟಿದ್ದಾರೆ. ಮಗುವಿನ ಅಜ್ಜ ಅಜ್ಜಿಗೂ ಕೊರೊನಾ ಸೋಂಕು ಇರುವುದು ದೃಢವಾಗಿದ್ದು, ಏನೂ ಗೊತ್ತಾಗದೆ ಮಗು ಆತಂಕಕ್ಕೆ ಒಳಗಾಗಿದೆ.
Laxmi News 24×7