ನಟ ಚಿಕ್ಕಣ್ಣ ಕನ್ನಡ ಚಿತ್ರರಂಗದ ಬ್ಯುಸಿ ಹಾಸ್ಯನಟರಲ್ಲಿ ಒಬ್ಬರು. ಕುರಿಬಾಂಡ್ ಕಾರ್ಯಕ್ರಮದಿಂದ ನಟನೆ ಆರಂಭಿಸಿದ ಚಿಕ್ಕಣ್ಣ ಇಂದಿನ ಈ ಹಂತಕ್ಕೆ ಏರಲು ಪಟ್ಟ ಶ್ರಮ ಅಷ್ಟಿಷ್ಟಲ್ಲ.
ಸಾಮಾನ್ಯ ಕುಟುಂಬದಿಂದ ಬಂದಿರುವ ಚಿಕ್ಕಣ್ಣ ಮೊದಲು ಜೀವನಕ್ಕಾಗಿ ಗಾರೆ ಕೆಲಸ ಮಾಡುತ್ತಿದ್ದರು. ಮೇಸ್ತ್ರಿ ಕೈಕೆಳಗೆ ದಿನಗೂಲಿಗೆ ಮನೆಗಳ ಗಾರೆ ಕೆಲಸಕ್ಕೆ ಹೋಗುತ್ತಿದ್ದ ಚಿಕ್ಕಣ್ಣ ನಟನಾಗುವ ಉದ್ದೇಶದಿಂದ ಬೆಂಗಳೂರಿಗೆ ಬಂದು ಹಲವು ಸುತ್ತು ಸೈಕಲ್ ಹೊಡೆದ ಬಳಿಕ ಇಂದಿನ ಸ್ಥಿತಿಗೆ ತಲುಪಿದ್ದಾರೆ.
ಆದರೆ ಚಿಕ್ಕಣ್ಣ ಮತ್ತೆ ತಮ್ಮ ಹಳೆ ವೃತ್ತಿಗೆ ಮರಳಿದ್ದಾರೆ. ಹೌದು, ಚಿಕ್ಕಣ್ಣ ಗಾರೆ ಕೆಲಸ ಮಾಡುತ್ತಿದ್ದಾರೆ. ಆದರೆ ಬೇರೆಯವರ ಮನೆಯ ಗಾರೆ ಕೆಲಸ ಅಲ್ಲ ಬದಲಿಗೆ ತಮ್ಮದೇ ತೋಟದ ಮನೆಯ ಗಾರೆ ಕೆಲಸ ಮಾಡುತ್ತಿದ್ದಾರೆ.
ಮೈಸೂರಿನ ಬಳಿ ದೊಡ್ಡ ಫಾರ್ಮ್ ನಿರ್ಮಿಸಿರುವ ಚಿಕ್ಕಣ್ಣ ಅಲ್ಲಿಯೇ ಸಣ್ಣದೊಂದು ಮನೆ ನಿರ್ಮಾಣ ಮಾಡುತ್ತಿದ್ದು, ಮನೆ ನಿರ್ಮಾಣ ಕಾರ್ಯಕ್ಕೆ ತಾವೇ ಕೈ ಜೋಡಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಚಿತ್ರೀಕರಣ ಇಲ್ಲದ ಕಾರಣ ಸಮಯದ ಸದುಪಯೋಗಕ್ಕಾಗಿ ತಾವು ಗಾರೆ ಕೆಲಸ ಮಾಡುತ್ತಿದ್ದಾರೆ ಚಿಕ್ಕಣ್ಣ.
ನಟ ಚಿಕ್ಕಣ್ಣ ಗಾರೆ ಕೆಲಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಿಮೆಂಟು ಕಲಸಿ ಗೋಡೆಗೆ ಹಚ್ಚಿ ಸಪಾಟು ಮಾಡುವ ಕಾರ್ಯವನ್ನು ಚಿಕ್ಕಣ್ಣ ಮಾಡುತ್ತಿದ್ದಾರೆ. ಚಿಕ್ಕಣ್ಣನ ಈ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Laxmi News 24×7