ಬೆಂಗಳೂರು : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿದ್ದರ ಪರಿಣಾಮ ಅನ್ನದಾತ ತೀವ್ರ ಸಂಕಷ್ಟಕ್ಕೆ ಸಿಲುಕಿರೋದು ನಿಜ. ಆದ್ರೆ ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆ ಅವಿರತ ಶ್ರಮಿಸುತ್ತಿದೆ.
ಸಚಿವ ಡಾ. ನಾರಾಯಣಗೌಡ ಅವರ ಸೂಚನೆಯಂತೆ ತರಕಾರಿ, ಹಣ್ಣು ಮಾರಾಟದ ಬಗ್ಗೆ ಈಗಾಗಲೆ ಕ್ರಮ ತೆಗೆದುಕೊಳ್ಳಲಾಗಿದ್ದು, ಸುಸೂತ್ರವಾಗಿ ಮಾರಾಟ ಕೂಡ ನಡೆಯುತ್ತಿದೆ. ಆದರೆ ಟೊಮೋಟೊ ಬೆಳೆಗಾರರ ಸಮಸ್ಯೆ ಮುಂದುವರೆದಿತ್ತು. ಬೆಲೆ ಪಾತಾಳಕ್ಕೆ ಕುಸಿದ ಪರಿಣಾಮ ರೈತರ ಸ್ಥಿತಿ ಚಿಂತಾಜನಕವಾಗಿತ್ತು.
ಈ ಹಿನ್ನೆಲೆಯಲ್ಲಿ ಸಚಿವರ ಸೂಚನೆಯಂತೆ ಟೊಮೋಟೊ ಸಂಸ್ಕರಣಾ ಘಟಕ ತತ್ಕ್ಷಣವೇ ಪ್ರಾರಂಭಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ 3 ಹಾಗೂ ಹೊರ ರಾಜ್ಯದಲ್ಲಿರುವ (ಹೊಸೂರು ಹಾಗೂ ಕೃಷ್ಣಗಿರಿ) ಎರಡು ಘಟಕ ಸೇರಿ ಒಟ್ಟು 5 ಸಂಸ್ಕರಣಾ ಘಟಕ ಪ್ರಾರಂಭಿಸಲು ಕ್ರಮ ವಹಿಸಲಾಗಿದೆ.
ಘಟಕ ಆರಂಭಿಸಲು ಕಚ್ಚಾ ವಸ್ತು ಸಾಗಾಣಿಕೆ ಸಮಸ್ಯೆ ಇತ್ತು. ಸರ್ಕಾರದ ಅನುಮತಿ ಬೇಕಾಗಿತ್ತು. ಮಾನವ ಸಂಪನ್ಮೂಲದ ಕೊರತೆ ಇತ್ತು. ಈಗ ಸಚಿವ ಡಾ. ನಾರಾಯಣಗೌಡ ಅವರೇ ಮುತುವರ್ಜಿ ವಹಿಸಿ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿ, ಅನುಮತಿ ಕೊಡಿಸಿದ್ದಾರೆ.
ಈ ಎಲ್ಲ ಸಮಸ್ಯೆ ಪರಿಹರಿಸುವ ಸಂಬಂಧ ಚರ್ಚಿಸಿದ್ದಾರೆ. ಅತಿ ಶೀಘ್ರದಲ್ಲಿ ಈ ಎಲ್ಲ ಸಂಸ್ಕರಣಾ ಘಟಕ ಕಾರ್ಯಾರಂಭ ಮಾಡಲಿದೆ. ಪ್ರತಿ ದಿನ ಈ ಎಲ್ಲ ಘಟಕಗಳಿಗೆ ಒಟ್ಟು 1750 ಮೆಟ್ರಿಕ್ ಟನ್ ನಷ್ಟು ಟೊಮೆಟೊ ಬೇಕಾಗಲಿದೆ. ಬೇಡಿಕೆ ಹೆಚ್ಚಾಗುವ ಕಾರಣ ಟೊಮೋಟೊ ಧಾರಣೆಯಲ್ಲೂ ಏರಿಕೆ ಆಗಲಿದ್ದು, ರೈತರ ಸಮಸ್ಯೆ ಪರಿಹಾರವಾಗಲಿದೆ.