ಬೆಳಗಾವಿ, ಮಾರ್ಚ್ 29: ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬಿಜೆಪಿಗೆ ವಿರುದ್ಧವಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣವು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ತಿರುಗು ಬಾಣವಾಗಲಿದೆ ಎಂದರು.
ಸಿಡಿ ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಅದನ್ನು ಚುನಾವಣಾ ವಿಷಯವಾಗಿ ಬಳಸಿಕೊಳ್ಳುವುದಿಲ್ಲ ಎಂದ ಸಿದ್ದರಾಮಯ್ಯ, ಸಿಡಿ ಪ್ರಕರಣದ ಎಸ್‌ಐಟಿ ತನಿಖೆ ಮೇಲೆ ಯಾವ ನಂಬಿಕೆ ಇಲ್ಲ. ಸಿಡಿ ಪ್ರಕರಣ ನಿಷ್ಪಕ್ಷಪಾತವಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕೆಂದು ನಾವು ಆಗ್ರಹಿಸಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸ್ಟ್ಯಾಂಡ್ ಇಲ್ಲ, ಅದು ಬಸ್‌ಸ್ಟ್ಯಾಂಡ್ ಎಂಬ ಪ್ರಹ್ಲಾದ್ ಜೋಶಿ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, ಬಸ್‌ಸ್ಟ್ಯಾಂಡ್ ಆಗಿರೋರು ಯಾರಪ್ಪ? ಮಿಸ್ಟರ್ ನರೇಂದ್ರ ಮೋದಿ ಬಸ್‌ಸ್ಟ್ಯಾಂಡ್ ಆಗಿದ್ದಾರೆ ಎಂದು ಉತ್ತರಿಸಿದರು.
ಪ್ರಹ್ಲಾದ್ ಜೋಶಿ ಒಬ್ಬ ಸೈಡ್ ಆಯಕ್ಟರ್, ಡೈರೆಕ್ಟರ್ ಆರ್‌ಎಸ್‌ಎಸ್. ಬೆಲೆ ಏರಿಕೆ, ಕೇಂದ್ರ ಸರ್ಕಾರದ ವೈಫಲ್ಯ, ರೈತ ವಿರೋಧಿ ಕಾನೂನು ತಂದಿರುವುದು, ಬೆಲೆ ಏರಿಕೆ ನಿಯಂತ್ರಣ ಇಲ್ಲದಿರುವುದು, ಅಚ್ಛೆ ದಿನ್ ಇಲ್ಲ ನರಕ ಆಗಿಬಿಟ್ಟಿದೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.

ಕಾಂಗ್ರೆಸ್ ಪಕ್ಷ ಯಾವುದೇ ಜಾತಿಗೆ ಸೀಮಿತವಾದ ಪಾರ್ಟಿ ಅಲ್ಲ, ಎಲ್ಲಾ ಜಾತಿಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷ ಕಾಂಗ್ರೆಸ್ ಆಗಿದ್ದು, ಸತೀಶ್ ಜಾರಕಿಹೊಳಿ ಬಹಳ ಒಳ್ಳೆಯ, ಸಮರ್ಥ ಅಭ್ಯರ್ಥಿ ಆಗಿದ್ದಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.