ಬೆಳಗಾವಿ(ಮಾರ್ಚ್ 10): ಸದ್ಯ ರಾಜ್ಯದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಜೋರಾಗಿ ಸದ್ದು ಮಾಡುತ್ತಿದೆ. ಈ ಷಡ್ಯಂತ್ರದ ಹಿಂದೆ ಇರೋದು ಯಾರು ಎಂಬುದು ನನಗೆ ಗೊತ್ತಿದೆ. ಶೀಘ್ರದಲ್ಲಿ ದೂರು ದಾಖಲಿಸಿ ಕಾನೂನು ಹೋರಾಟ ಮಾಡುತ್ತೇನೆ. ನನಗೆ ಈಗ ಅಧಿಕಾರ ಮುಖ್ಯವಲ್ಲ, ಮನೆತನದ ಮರ್ಯಾದೆ ಮುಖ್ಯ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಅಷ್ಟೇ ಅಲ್ಲ ಕಾನೂನು ಹೋರಾಟಕ್ಕೆ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಪ್ರಕರಣ ರಾಜ್ಯ ಹಾಗೂ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಠಿಸಿದೆ. ಇದು ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆಯ ಮೇಲೆ ಪರಿಣಾಮ ಬರಲಿದೆ. ಕಾಂಗ್ರೆಸ್, ಬಿಜೆಪಿ ಪಕ್ಷದ ರಾಜಕೀಯ ಲೆಕ್ಕಾಚಾರವೇ ಅದಲು- ಬದಲು ಆಗಲಿದೆ.
ರಮೇಶ ಜಾರಕಿಹೊಳಿ ಸಿಡಿ ಬಹಿರಂಗವಾದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜತೆಗೆ ಸದ್ಯ ಗಾಯಗೊಂಡ ಹುಲಿಯಂತೆ ಆಗಿರೋ ಜಾರಕಿಹೊಳಿ ಷಡ್ಯಂತ್ರ ಮಾಡಿದ ಮಹಾನಾಯಕನ ವಿರುದ್ಧ ಕಾನೂನು ಹೋರಾಟದ ನಿರ್ಧಾರ ಮಾಡಿದ್ದಾರೆ. ಶೀಘ್ರದಲ್ಲಿಯೇ ಈ ಬಗ್ಗೆ ದೂರು ದಾಖಲಿಸಿ ಪ್ರಭಾವಿ ನಾಯಕನ ಹೆಸರು ಬಹಿರಂಗ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಳಗಾವಿ ಗಡಿಯಲ್ಲಿ ಜಾರಿಯಾಗದ ಕಟ್ಟುನಿಟ್ಟಿನ ಕ್ರಮ; ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಕೊರೋನಾತಂಕ
ರಾಜ್ಯ ರಾಜಕಾರಣದಲ್ಲಿ ಸಿಡಿ ಪ್ರಕರಣ ಬೆಳಗಾವಿ ಲೋಕಸಭಾ ಉಪಚುನಾವಣೆಯ ಮೇಲೆ ನೇರ ಪರಿಣಾಮ ಬೀರಲಿದೆ. ಈವರೆಗೆ 20ಕ್ಕೂ ಹೆಚ್ಚು ಜನ ಆಕಾಂಕ್ಷಿಗಳು ನಾ ಮುಂದು, ತಾ ಮುಂದು ಎಂದು ಟಿಕೆಟ್ ಗಾಗಿ ಲಾಬಿ ಮಾಡುತ್ತಿದ್ದರು. ಬಿಜೆಪಿ ಟಿಕೆಟ್ ಸಿಕ್ಕರೆ ಗೆಲುವು ನಿಶ್ಚಿತ ಎಂಬಂತೆ ಆಗಿತ್ತು. ಆದರೇ ಇದೀಗ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಉಸ್ತುವಾರಿ ವಹಿಸಬೇಕಿದ್ದ ರಮೇಶ ಜಾರಕಿಹೊಳಿ ಮಾಜಿಯಾಗಿದ್ದು, ಯಾರೊಬ್ಬರು ಈ ಬಗ್ಗೆ ಮಾತನಾಡುತ್ತಿಲ್ಲ. ಇದು ಚುನಾವಣೆ ಮೇಲೆ ನೇರವಾಗಿ ಪರಿಣಾಮ ಬೀರುವ ಭೀತಿ ಎದುರಾಗಿದೆ.
ಸದ್ಯ ಸಿಡಿ ಪ್ರಕರಣದಲ್ಲಿ ಷಡ್ಯಂತ್ರ ಮಾಡಿದವರ ವಿರುದ್ಧ ಕಾನೂನು ಹೋರಾಟ ನಡೆಸಲು ಜಾರಕಿಹೊಳಿ ಸಹೋದರರು ತಿರ್ಮಾನಿಸಿದ್ದಾರೆ. ಈ ಪ್ರಕರಣದಲ್ಲಿ ಬೆಳಗಾವಿ ನಾಯಕರ ಕೈವಾಡವಿದೆ ಎನ್ನುವ ಆರೋಪವನ್ನು ಸಚಿವ ಸಿ ಪಿ ಯೋಗೇಶ್ವರ್ ಸಹ ಮಾಡಿದ್ದರು. ಆದರೆ ರಮೇಶ ಜಾರಕಿಹೊಳಿ ಯಾರ ಹೆಸರನ್ನು ಹೇಳದೆ ಕೇವಲ ಸುಳಿವು ಬಿಟ್ಟು ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿಯೂ ಇದೇ ಸ್ಥಿತಿ ಸದ್ಯ ನಿರ್ಮಾಣವಾಗಿದೆ. ಈ ಬಾರಿಯ ಉಪಚುನಾವಣೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೇ ಇದೀಗ ಸಿಡಿ ಪ್ರಕರಣದಿಂದ ಇಡೀ ಕುಟುಂಬಕ್ಕೆ ಅವಮಾನವಾಗಿದೆ. ಇದರಿಂದ ಸತೀಶ ಜಾರಕಿಹೊಳಿ ನಿರ್ಧಾರ ಬದಲಿಸಲಿದ್ದಾರೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿಯಾಗಿರೋ ಜಾರಕಿಹೊಳಿ ಸಹೋದರರು ಚುನಾವಣೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕು.