ರಾಮನಗರ(ಡಿಸೆಂಬರ್. 22): ಜೆಡಿಎಸ್ – ಬಿಜೆಪಿ ಹೊಂದಾಣಿಕೆ ವಿಚಾರ ಅದು ಅವರವರ ಪಕ್ಷಗಳಿಗೆ ಬಿಟ್ಟ ವಿಚಾರ, ಯಾರು ಯಾರ ಜೊತೆಯಾದರೂ ಹೋಗಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಹೆಂಡತಿ ಉಷಾ ಜೊತೆಗೆ ಗ್ರಾ.ಪಂ ಚುನಾವಣೆ ಹಿನ್ನೆಲೆ ಮತದಾನ ಮಾಡಲು ಕನಕಪುರದ ಹುಟ್ಟೂರು ದೊಡ್ಡಾಲಹಳ್ಳಿಗೆ ಆಗಮಿಸಿದ್ದ ಡಿಕೆಶಿ ಮತಗಟ್ಟೆ ಸಂಖ್ಯೆ 3 ರಲ್ಲಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜಕೀಯ ಅಂದ್ರೆ ಸಾಧ್ಯತೆಗಳ ಕಲೆ, ನನ್ನ ಸಣ್ಣ ರಾಜಕೀಯ ಅನುಭವದಲ್ಲಿ ಹೇಳುತ್ತಿದ್ದೇನೆ. ಈಗ ದೇಶದಲ್ಲಿಯೇ ಏನೆನೋ ಆಗುತ್ತಿದೆ .ಹಾಗಾಗಿ ಇನ್ನು ಸಮಯವಿದೆ, ಮುಂದೆ ನೋಡೋಣ ಎಂದರು. ಇನ್ನು ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿಯವರ ಹೇಳಿಕೆ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಜೆಡಿಎಸ್ ನವರು ದಡ್ಡರಲ್ಲ, ಅವರಿಗೆ ಸಾಕಷ್ಟು ಅನುಭವವಿದೆ. ನಾವು ಯಾವುದಕ್ಕೂ ತಲೆಹಾಕುವುದಿಲ್ಲ ಎಂದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ವಿಚಾರಕ್ಕೆ ನಮ್ಮವರೇ ಪಿತೂರಿ ಮಾಡಿದ್ದರೂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಕಾರ್ಯಕರ್ತರ ಬಳಿ ಸೋಲಿನ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ, ಮತದಾನದ ತೀರ್ಮಾನ ಮಾಡಿ ಆಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.