ಬೆಂಗಳೂರು,ಡಿ.- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸಿದ ಮುಷ್ಕರದ ಸಮಯದಲ್ಲಿ ಕರ್ತವ್ಯನಿರತ ಸಿಬ್ಬಂದಿಗಳ ಮೇಲೆ ದೈಹಿಕ ಹಲ್ಲೆ ಮಾಡಿ, ಬಸ್ಸುಗಳನ್ನು ಜಖಂಗೊಳಿಸಿದ ಹಾಗೂ ಎಫ್‍ಐಆರ್ ದಾಖಲಾದ ಕೆಲವೇ ಸಿಬ್ಬಂದಿಗಳ ಮೇಲೆ ನಿಯಮಾನುಸಾರ ಕ್ರಮಕೈಗೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ.
ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ ಒಟ್ಟು 13 ಸಿಬ್ಬಂದಿಗಳ ಮೇಲೆ ಈ ತನಕ ಕ್ರಮ ಕೈಗೊಳ್ಳಲಾಗಿದೆ ಹೊರತು ಇನ್ನಾವುದೇ ಸಿಬ್ಬಂದಿ ಮೇಲೆ ಕ್ರಮಕೈಗೊಂಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೋಲಾರ ವಿಭಾಗದಲ್ಲಿ 200 ನೌಕರರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದು ಸತ್ಯಕ್ಕೆ ದೂರವಾಗಿದೆ.
ಮುಷ್ಕರ ಸಮಯದ ನಾಲ್ಕು ದಿನಗಳ ವೇತನ ಪಾವತಿ ಕಡಿತದ ಬಗ್ಗೆಯೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಆಡಳಿತ ಮಂಡಳಿ ಮತ್ತು ಸರ್ಕಾರದ ಮಟ್ಟದಲ್ಲಿ ಇದರ ಬಗ್ಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ನೌಕರರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಗೊಂದಲಕ್ಕೆ ಒಳಗಾಗಬಾರದೆಂದು ಸ್ಪಷ್ಟಪಡಿಸಿದೆ.
ಸಾರಿಗೆ ಇಲಾಖೆ ಅಧೀನದ ನಾಲ್ಕು ಸಾರಿಗೆ ಸಂಸ್ಥೆಗಳಿಂದ ಮುಷ್ಕರದಲ್ಲಿ ಭಾಗಿಯಾಗಿದ್ದ ಸುಮಾರು 200 ಸಿಬ್ಬಂದಿಯನ್ನು ಅಮಾನತ್ತು ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.