ಬಳ್ಳಾರಿ: ಕೊರೊನಾ ಹಿನ್ನೆಲೆ ಬಂದ್ ಮಾಡಲಾಗಿದ್ದ ಆಫ್‍ಲೈನ್ ಟಿಕೆಟ್‍ನ್ನು ಭಾರತೀಯ ಪುರಾತತ್ವ ಇಲಾಖೆ ಪುನರಾರಂಭಿಸಿದೆ. ಈ ಮೂಲಕ ಪ್ರವಾಸಿಗರು ಆಫ್‍ಲೈನ್ ಹಾಗೂ ಆನ್‍ಲೈನ್ ಎರಡೂ ವಿಧಾನಗಳಿಂದ ಟಿಕೆಟ್ ಪಡೆಯಬಹುದಾಗಿದೆ.
ಕರೊನಾ ಹಿನ್ನಲೆ ತನ್ನ ವ್ಯಾಪ್ತಿಯ ಸ್ಮಾರಕಗಳ ವೀಕ್ಷಣೆಗೆ ಆಫ್‍ಲೈನ್ ಟಿಕೆಟ್ ಬಂದ್ ಮಾಡಿ, ಆನ್‍ಲೈನ್ ನಲ್ಲಿ ಮಾತ್ರ ಟಿಕೆಟ್ ಪಡೆಯಲು ಭಾರತೀಯ ಪುರಾತತ್ವ ಇಲಾಖೆ ಅವಕಾಶ ಕಲ್ಪಿಸಿತ್ತು. ಆದರೆ ಡಿ.19 ರಿಂದ ಆಫ್‍ಲೈನ್‍ನಲ್ಲೂ ಟಿಕೆಟ್ ಖರೀದಿಸಲು ಅವಕಾಶ ಕಲ್ಪಿಸಿದೆ. ಇದರಿಂದ ಸ್ಥಳೀಯ ಹಾಗೂ ಮಾಹಿತಿ ಇಲ್ಲದೆ ಬಂದ ಪ್ರವಾಸಿಗರು ಹಾಗೂ ಜಿಲ್ಲೆಯ ಹಂಪಿ ಸ್ಮಾರಕಗಳ ವೀಕ್ಷಕರಿಗೆ ಇದ್ದ ಸಮಸ್ಯೆ ಬಗೆಹರಿದಂತಾಗಿದೆ.
ಹಂಪಿಯ ವಿಜಯ ವಿಠಲ ದೇವಸ್ಥಾನ ಹಾಗೂ ಕಮಲ ಮಹಲ್, ಕಮಲಾಪುರದ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯದ ಬಳಿಯ ಕೌಂಟರ್‍ನಲ್ಲಿ ಪ್ರವಾಸಿಗರು ಟಿಕೆಟ್ ಖರೀದಿಸಬಹುದಾಗಿದೆ. ಇದೇ ವೇಳೆ ಇಲಾಖೆಯು ಪ್ರತಿ ದಿನ ಟಿಕೆಟ್ ಖರೀದಿ ಮೇಲೆ ಹೇರಿದ್ದ ಮಿತಿ ಕೂಡ ತೆಗೆದು ಹಾಕಿದೆ ಎಂದು ಎಎಸ್‍ಐ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್ ಪಿ.ಕಾಳಿಮುತ್ತು ತಿಳಿಸಿದ್ದಾರೆ.ಲಾಕ್‍ಡೌನ್ ಸಡಿಲಗೊಂಡ ನಂತರ ಜುಲೈನಲ್ಲಿ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರಿಗೆ ಬಾಗಿಲು ತೆರೆದಿತ್ತು. ಆದರೆ ಕೊರೊನಾ ಸೋಂಕು ಹರಡುತ್ತಿದ್ದರಿಂದ ಆನ್‍ಲೈನ್ ನಲ್ಲಿಮಾತ್ರ ದಿನಕ್ಕೆ ಎರೆಡು ಸಾವಿರ ಪ್ರವಾಸಿಗರಿಗೆ ಮಾತ್ರ ಟಿಕೆಟ್ ನೀಡುವ ವ್ಯವಸ್ಥೆ ಇತ್ತು. ಸ್ಮಾರಕ ನೋಡಲು ಬಯಸುವವರು ಆನ್‍ಲೈನ್‍ನಲ್ಲಿ ಟಿಕೆಟ್ ಖರೀದಿಸಿ, ಅದನ್ನು ಡೌನ್‍ಲೋಡ್ ಮಾಡಿಕೊಂಡು ಸ್ಮಾರಕಗಳ ಪ್ರವೇಶ ದ್ವಾರದಲ್ಲಿನ ಭದ್ರತಾ ಸಿಬ್ಬಂದಿಗೆ ತೋರಿಸಬೇಕಿತ್ತು. ಹಂಪಿಯಲ್ಲಿ ಮೊಬೈಲ್ ನೆಟ್‍ವರ್ಕ್ ಸಿಗದ ಕಾರಣ ಪ್ರವಾಸಿಗರು ಆನ್‍ಲೈನ್‍ನಲ್ಲಿ ಟಿಕೆಟ್ ಖರೀದಿಸಲಾಗದೆ ಅನೇಕರು ಹಿಂತಿರುಗುವ ಪರಿಸ್ಥಿತಿ ಸಹ ಇತ್ತು. ಆದರೆ ನಾಳೆಯಿಂದ ಈ ಸಮಸ್ಯೆ ದೂರವಾಗಲಿದೆ