ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಫೋರ್ಬ್ಸ್ ಶತಕೋಟ್ಯಧಿಪತಿಗಳ ಶ್ರೇಯಾಂಕದ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದ್ದಾರೆ. ಸೋಮವಾರದಂದು (ನವೆಂಬರ್ 2, 2020) ರಿಲಯನ್ಸ್ ಷೇರುಗಳ ಬೆಲೆ ಭಾರೀ ಇಳಿಕೆಯಾದ ಹಿನ್ನೆಲೆಯಲ್ಲಿ ಮುಕೇಶ್ ಆಸ್ತಿಯಲ್ಲಿ 700 ಕೋಟಿ ಅಮೆರಿಕನ್ ಡಾಲರ್ ಅಥವಾ 50 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಮೊತ್ತ ಕರಗಿದೆ.
ಮುಕೇಶ್ ಈಗ ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಗೂಗಲ್ ಸಹ ಸಂಸ್ಥಾಪಕ ಲ್ಯಾರಿ ಪೇಜ್ ಗಿಂತ ಒಂದು ಸ್ಥಾನ ಹಿಂದಿದ್ದಾರೆ. ಸೋಮವಾರದಂದು ರಿಲಯನ್ಸ್ ಷೇರಿನ ಬೆಲೆಯಲ್ಲಿ ಹತ್ತಿರಹತ್ತಿರ 9% ಇಳಿಕೆ ಆಗಿದ್ದು, 1871.90 ತಲುಪಿತ್ತು. ಅಕ್ಟೋಬರ್ 30ನೇ ತಾರೀಕಿನಂದು ರಿಲಯನ್ಸ್ ಎರಡನೇ ತ್ರೈಮಾಸಿಕದ ಫಲಿತಾಂಶ ಬಂದಿದ್ದು, ಲಾಭದ ಪ್ರಮಾಣ 32.5% ಕುಸಿತವಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ದರ ಒಂದೇ ದಿನ, ಸೋಮವಾರ ಕಂಡ ಕುಸಿತಕ್ಕೆ ಕಂಪೆನಿಯ ಹೂಡಿಕೆದಾರರ ಸಂಪತ್ತು ಎಂಬತ್ತು ಸಾವಿರ ಕೋಟಿ ರುಪಾಯಿಗೂ ಹೆಚ್ಚು ಮೊತ್ತ ಕೊಚ್ಚಿಹೋಗಿದೆ.