ಬೆಳಗಾವಿ: ಬಿಜೆಪಿಗೆ ಬರುವಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕರೆದರು. ಆದರೆ ನಾನು ಅವರಿಗೆ ಕೈಮುಗಿದು ನಮಸ್ಕಾರ ಮಾಡಿದ್ದೇನೆ ಎಂದು ಮಾಜಿ ಸಚಿವ ವಿನಯ್ ಕುಲ್ಕರ್ಣಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮಿಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದ ವೇದಿಕೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ, ವಿನಯ್ ಕುಲ್ಕರ್ಣಿಗೆ ಬಿಜೆಪಿಗೆ ಬರುತ್ತೀಯಲ್ಲ ಎಂದು ಆಹ್ವಾನ ನೀಡಿದ ಪ್ರಸಂಗ ನಡೆಯಿತು. ಈ ವೇಳೆ ವಿನಯ್ ಕುಲ್ಕರ್ಣಿ, ಸಚಿವ ಜಾರಕಿಹೊಳಿಗೆ ಕೈಮುಗಿದು ಕುಳಿತುಕೊಂಡರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ವಿನಯ್ ಕುಲ್ಕರ್ಣಿ, ನಾನು ಬಿಜೆಪಿಗೆ ಸೇರುವ ಬಗ್ಗೆ ಎಲ್ಲಿಯೂ ಚರ್ಚೆ ನಡೆಸಿಲ್ಲ. ನಾನು ನನ್ನ ಹೊಲ ಬಿಟ್ಟು ಎಲ್ಲಿಯೂ ಹೋಗಿಲ್ಲ. ಆದರೆ ನಾನು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂಬ ಚರ್ಚೆ ನಡೆಯುತ್ತಿದೆ. ರಮೇಶ್ ನನಗೆ ಬಿಜೆಪಿಗೆ ಬರುವಂತೆ ಹೇಳಿದರು. ಆದರೆ ಎಲ್ಲರ ಮುಂದೆ ಕೈಮುಗಿದು ಅವರಿಗೆ ನಮಸ್ಕಾರ ಮಾಡಿದೆ. ಬಿಜೆಪಿಗೆ ಸೇರುವ ಯೋಚನೆಯಿಲ್ಲ ಎಂದು ಹೇಳಿದರು.