ಶಿವಮೊಗ್ಗ: ಹವಾಮಾನ ವೈಪರಿತ್ಯದಿಂದಾಗಿ ಎಂಎಲ್‍ಸಿ ರಘು ಆಚಾರ್ ಸಂಚಾರ ಮಾಡುತ್ತಿದ್ದ ಹೆಲಿಕಾಪ್ಟರ್ ದಾರಿ ಮಧ್ಯದಲ್ಲಿಯೇ ಲ್ಯಾಂಡ್ ಆದ ಘಟನೆ ಇಂದು ಜಿಲ್ಲೆಯ ಭದ್ರಾವತಿ ತಾಲೂಕಿನ ಅಂಚೆ ಸಿದ್ದಾಪುರದಲ್ಲಿ ನಡೆದಿದೆ.ಶಿವಮೊಗ್ಗದಲ್ಲಿ ಇಂದು ನಡೆದ ಶಾಸಕ ಬಿ.ಕೆ ಸಂಗಮೇಶ್ ಅವರ ಸಹೋದರನ ಪುತ್ರಿಯ ವಿವಾಹ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಎಂಎಲ್‍ಸಿ ರಘು ಆಚಾರ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿದ್ದರು. ಆದರೆ ಹೆಲಿಕಾಪ್ಟರ್ ಭದ್ರಾವತಿ ಸಮೀಪ ಬರುತ್ತಿದ್ದಂತೆ ಮೋಡ ಕವಿದ ವಾತಾವರಣ ಇದ್ದ ಪರಿಣಾಮ ಅಂಚೆ ಸಿದ್ದಾಪುರ ಗ್ರಾಮದ ಶಾಲೆಯೊಂದರ ಮೈದಾನದಲ್ಲಿಯೇ ಫೈಲೆಟ್ ನ ಸಮಯ ಪ್ರಜ್ಞೆಯಿಂದ ಲ್ಯಾಂಡ್ ಆಗಿದೆ.
ನಂತರ ಮಾಧ್ಯಮದವರ ಜೊತೆ ಮಾತನಾಡಿದ ರಘು ಆಚಾರ್, ದೇವರ ದಯೆಯಿಂದ ಯಾವುದೇ ಅವಘಡ ಸಂಭವಿಸಲಿಲ್ಲ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ವಾಪಸ್ ಬಂದಿದ್ದೇನೆ. ನಾನು 9 ವರ್ಷಗಳಿಂದ ಹೆಲಿಕಾಪ್ಟರ್ ನಲ್ಲಿ ಓಡಾಡುತ್ತಿದ್ದೇನೆ. ನನ್ನ ಜೀವನದಲ್ಲಿ ಇಂತಹ ಸಮಸ್ಯೆ ಯಾವಾಗಲೂ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಇಂತಹ ಸಮಸ್ಯೆ ಕಾಣಿಸಿಕೊಂಡಿದ್ದು ಕೆಲಕಾಲ ಗಾಬರಿಯಾಗುವಂತೆ ಮಾಡಿತ್ತು ಎಂದಿದ್ದಾರೆ.