ಬೆಳಗಾವಿ: ಬೆಳಗಾವಿಯಲ್ಲಿ ದಿನೇದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಜಿಲ್ಲೆಯ ಸಚಿವರ ವಿರುದ್ಧ ‘ಮಂತ್ರಿಗಳು ಎಲ್ಲಿದೀರಿ ಹುಡುಕಿಕೊಡಿ’ ಎಂಬ ಅಭಿಯಾನ ಆರಂಭಿಸುವಂತೆ ಮಾಧ್ಯಮಗಳಿಗೆ ಸತೀಶ್ ಜಾರಕಿಹೊಳಿ ಸಲಹೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು ಮಂತ್ರಿಗಳು ಎಷ್ಟು ಸಭೆ ನಡೆಸಬೇಕಾಗಿತ್ತೋ ಅಷ್ಟು ಮಾಡಿಲ್ಲ, ಜನರಿಗೆ ಸ್ಪಂದಿಸಿಲ್ಲ. ಬಹಳಷ್ಟು ಮಂತ್ರಿಗಳು ಇನ್ನೂ ಬೆಂಗಳೂರಿನಲ್ಲಿಯೇ ಇದ್ದಾರೆ. ತಮ್ಮ ಕ್ಷೇತ್ರಕ್ಕೂ ಬಂದಿಲ್ಲ, ತಮ್ಮ ಜಿಲ್ಲೆಗೂ ಬಂದಿಲ್ಲ ಇದೆಲ್ಲಾ ಜನರಿಗೂ ಗೊತ್ತು, ಜನ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಜಿಲ್ಲೆಯ 4 ಸಚಿವರಿದ್ದರೂ ಬೆಳಗಾವಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕಿತ್ತೋ ಅಷ್ಟು ಸರ್ಕಾರ ಕೊಟ್ಟಿಲ್ಲ. ಪ್ರತಿ ವಾರಕ್ಕೊಮ್ಮೆ ಸಭೆಯಾಗಬೇಕು. ವಿರೋಧ ಪಕ್ಷದವರು, ಎನ್‌ಜಿಓಗಳು, ಜನರ ಸಲಹೆ ಪಡೆಯಬೇಕು, ಆದರೆ ಮಂತ್ರಿಗಳೇ ಇಲ್ಲ . ಮಂತ್ರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಆದ್ರೆ ಅವರು ಮಾಡ್ತಿಲ್ಲ. ಮಂತ್ರಿಗಳೇ ಇಲ್ಲ ಎಂದರೆ ಯಾರಿಗೆ ಹೇಳಬೇಕು. ನಮಗೆ ತಿಳಿದಿದ್ದನ್ನು ಡಿಸಿಗೆ ಹೇಳಿದ್ದೇವೆ ಅವರು ಜಾರಿ ಮಾಡಿದ್ದಾರೆ ಎಂದರು.
ಇದಕ್ಕಾಗಿ ಮಾಧ್ಯಮದವರೆ ‘ಮಂತ್ರಿಗಳು ಎಲ್ಲಿದ್ದಾರೆ ಹುಡುಕಿ ಕೊಡಿ’ ಎಂಬ ಅಭಿಯಾನ ಆರಂಭಿಸಬೇಕು ಎಂದು ಸಲಹೆ ನೀಡಿದರು.