Breaking News

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ರಸಗೊಬ್ಬರದ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು: ರಮೇಶ್ ಜಾರಕಿಹೊಳಿ

Spread the love

ಬೆಳಗಾವಿ: ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ರಸಗೊಬ್ಬರದ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು. ಅಗತ್ಯಬಿದ್ದರೆ ಹೆಚ್ಚುವರಿ ರಸಗೊಬ್ಬರ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದರು.

ಗೊಬ್ಬರ ಕೊರತೆಯಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ  ಕರೆಯಲಾಗಿದ್ದ ಕೃಷಿ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸದ್ಯಕ್ಕೆ ಇರುವ ದಾಸ್ತಾನು ರೈತರಿಗೆ ಸಮರ್ಪಕವಾಗಿ ವಿತರಿಸಬೇಕು. ಒಂದು ವೇಳೆ ಜಿಲ್ಲೆಗೆ ಇನ್ನೂ ಹೆಚ್ಚಿನ ಪ್ರಮಾಣದ ರಸ ಗೊಬ್ಬರ ಪೂರೈಸಲು ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗುವುದು. ಇದಲ್ಲದೇ ಖುದ್ದಾಗಿ ಮಾತನಾಡುವುದಾಗಿ ತಿಳಿಸಿದರು.

ಬೀಜ ವಿತರಣೆ, ಮಳೆಯ ಪ್ರಮಾಣ ಹಾಗೂ ಬಿತ್ತನೆಯ ಕುರಿತು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡ ಸಚಿವರು, ಯಾವುದೇ ರೀತಿಯ ಸಮಸ್ಯೆಗಳಿದ್ದರೆ ತಮ್ಮ ಗಮನಕ್ಕೆ ತಂದರೆ ಸರ್ಕಾರದ ಮಟ್ಟದಲ್ಲಿ ತಕ್ಷಣವೇ ಪರಿಹರಿಸಲಾಗುವುದು ಎಂದು ಸಚಿವ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ತಿಳಿಸಿದರು.

ಹನಿ ನೀರಾವರಿ ಸೌಲಭ್ಯಗಳ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳುವ ಮೂಲಕ ರೈತರನ್ನು ಪಾಲುದಾರರಾಗಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಇದೇ ವೇಳೆ ರಸಗೊಬ್ಬರದ ಲಭ್ಯತೆ ಕುರಿತು ಸಚಿವರಿಗೆ ಮಾಹಿತಿಯನ್ನು ನೀಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಜಿಲ್ಲೆಗೆ ಈ ವರ್ಷ 63 ಸಾವಿರ ಟನ್ ಗೊಬ್ಬರ ಬಂದಿದೆ.  20 ಸಾವಿರ ಟನ್ ಕಳೆದ ವರ್ಷದ ದಾಸ್ತಾನು ಇತ್ತು. ಒಟ್ಟು 86 ಸಾವಿರ ಟನ್ ಗಳಲ್ಲಿ ಈಗಾಗಲೇ 76 ಸಾವಿರ ಟನ್ ವಿತರಿಸಲಾಗಿದೆ ಎಂದು ತಿಳಿಸಿದರು.

ಇನ್ನು ಹತ್ತು ದಿನಗಳಲ್ಲಿ ಮತ್ತೆ ಹತ್ತು ಸಾವಿರ ಟನ್ ಗೊಬ್ಬರ ದಾಸ್ತಾನು ಬರಲಿದೆ.  ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜುವಾರಿ ಗೊಬ್ಬರ ಕೊರತೆಯಿದೆ. ಅದರ ಬದಲಾಗಿ ಇತರೆ ಗೊಬ್ಬರ ತರಿಸಲಾಗಿದೆ. ಗೋಕಾಕ ಮತ್ತು ಅಥಣಿ ಸೇರಿದಂತೆ ಕೊರತೆ ಇರುವ ತಾಲ್ಲೂಕುಗಳಿಗೆ ಹೊಸ ದಾಸ್ತಾನು ಬಂದ ಬಳಿಕ ಕಳಿಸಲಾಗುತ್ತಿದೆ ಎಂದು ಮೊಖಾಶಿ ತಿಳಿಸಿದರು.

ಈ ವರ್ಷ ಇದುವರೆಗೆ ಸರಾಸರಿ ಮಳೆಗಿಂತ ಉತ್ತಮ ಮಳೆಯಾಗಿದ್ದು, ರೈತರು ಹೆಚ್ಚುವರಿ ಗೊಬ್ಬರ ಸಂಗ್ರಹಿಸುತ್ತಿರುವುದರಿಂದ ಕೆಲವು ಕಡೆ ದಾಸ್ತಾನು ಕಡಿಮೆಯಾಗಿದೆ. ಆದರೆ ಜಿಲ್ಲೆಗೆ ಅಗತ್ಯವಿರುವಷ್ಟು ಗೊಬ್ಬರ ಲಭ್ಯವಿದೆ ಎಂದು ಹೇಳಿದರು.

ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಎಚ್.ಡಿ.ಕೋಳೇಕರ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಖಾನಾಪೂರ ಪೊಲೀಸರು 4 ಕಳ್ಳತನ ಪ್ರಕರಣಗಳ ತನಿಖೆಯಲ್ಲಿ 14.90 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳು ವಶಕ್ಕೆ ಪಡೆದುಕೊಂಡು ಆರೋಪಿಗಳ ಬಂಧನ ಮಾಡಿದ್ದಾರೆ

Spread the love ಖಾನಾಪೂರ ಪೊಲೀಸರು 4 ಕಳ್ಳತನ ಪ್ರಕರಣಗಳ ತನಿಖೆಯಲ್ಲಿ 14.90 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳು ವಶಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ