ಚಿಕ್ಕಮಗಳೂರು: ಈ ಚೀಟಿಯಲ್ಲಿ ಬರೆಯಲು ಜಾಗ ಇಲ್ಲ ಬೇರೆ ಚೀಟಿ ಬರೆಸಿಕೊಂಡು ಬನ್ನಿ ಎಂದಿದ್ದಕ್ಕೆ ರೋಗಿಯ ಜೊತೆ ಬಂದಿದ್ದ ಯುವಕ, ವೈದ್ಯರ ಮೇಲೆ ಹಲ್ಲೆ ಮಾಡಿರುವ ಆರೋಪವೊಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೇಳಿಬಂದಿದೆ.
ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಹಮದ್ ಎಂಬ ಹುಡುಗ ವಯಸ್ಸಾದ ವೃದ್ಧರೊಬ್ಬರನ್ನು ಸಂತೋಷ್ ಎಂಬ ವೈದ್ಯರ ಕೊಠಡಿ ಮುಂಭಾಗ ಕೂರಿಸಿ ವೈದ್ಯರ ಬಳಿ ಚೀಟಿ ತೆಗೆದುಕೊಂಡು ಹೋಗಿದ್ದಾನೆ. ಈ ವೇಳೆ ವೈದ್ಯ ಸಂತೋಷ್, ಈ ಚೀಟಿಯಲ್ಲಿ ಬರೆಯಲು ಜಾಗ ಇಲ್ಲ ಬೇರೆ ಚೀಟಿ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಯುವಕ ನೀನು ನೋಡದಿದ್ದರೆ ಬೇಡ, ಬೇರೆ ಕಡೆ ತೋರಿಸುತ್ತೇನೆ ಎಂದು ಬಾಗಿಲನ್ನ ಜೋರಾಗಿ ಎಳೆದುಕೊಂಡು ಅಲ್ಲಿಂದ ಹೋಗಿದ್ದಾನೆ. ಈ ಘಟನೆಯಾದ ಸ್ವಲ್ಪ ಸಮಯದ ನಂತರ ಅಹಮದ್ ಎಂಬ ಯುವಕ ನಾಲ್ಕೈದು ಜನರೊಂದಿಗೆ ಆಸ್ಪತ್ರೆಗೆ ಬಂದು ನನ್ನ ತಂದೆಯನ್ನು ಏಕೆ ನೋಡಲಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವೈದ್ಯ ಸಂತೋಷ್ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವೈದ್ಯರ ಜೊತೆ ಗಲಾಟೆ ಮಾಡಿದ ಯುವಕರು ನೀನು ಹೊರಗಡೆ ಬಾ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಬರದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನು ವೈದ್ಯ ಸಂತೋಷ್ ಮೇಲಾಧಿಕಾರಿಗಳ ಗಮನಕ್ಕೆ ತಂದು ಮೂಡಿಗೆರೆಯಲ್ಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮೂಡಿಗೆರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.