ಬೀದರ್: ಜಿಲ್ಲೆಯಲ್ಲಿ ಕಳೆದ 6 ವರ್ಷಗಳಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿ ಅತೀ ಹೆಚ್ಚು ಸಂಚಾರ ನಿಮಯ ಉಲ್ಲಂಘಿಸಿದ್ದಾರೆ. ಈ ಮೂಲಕ ಬೀದರ್ ಸಂಚಾರಿ ಪೊಲೀಸರು ಬರೋಬ್ಬರಿ 9.73 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ.
ಸಂಚಾರಿ ಪೊಲೀಸರು ರಸ್ತೆ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದರೂ ಕೂಡ ವಾಹನ ಸವಾರರು ಮಾತ್ರ ಸಂಚಾರಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ದಂಡದ ಮೊತ್ತ ಸಾವಿರ ದಾಟಿದರೂ ಸವಾರರ ಬೇಜವಾಬ್ದಾರಿ ಮಾತ್ರ ಕಡಿಮೆಯಾಗಿಲ್ಲ, ಹೆಲ್ಮೆಟ್ ಧರಿಸದ ಪ್ರಕರಣಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ದಂಡ ವಸೂಲಾತಿಯ ಪ್ರಮಾಣ ಇಳಿಕೆಯಾಗಿದೆ.
ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಒಟ್ಟು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ಇರೋ ಪ್ರಕರಣಗಳೇ ಸಿಂಹಪಾಲಾಗಿದೆ. ಪೊಲೀಸರು ನಿರಂತರ ಜಾಗೃತಿ ಮೂಡಿಸುತ್ತಿರುವ ಪರಿಣಾಮ ದಂಡದ ಮೊತ್ತ ಇಳಿಕೆಯಾಗಿದ್ದು, ಆದರೂ ಸವಾರರು ಮಾತ್ರ ತಲೆಗೆ ಹೆಲ್ಮೆಟ್ ಧರಿಸಲು ಇನ್ನೂ ಮೀನಾಮೇಷ ಎಣಿಸುತ್ತಿರುವುದು ವಿಪರ್ಯಾಸವಾಗಿದೆ.
ಜಿಲ್ಲಾ ಪೊಲೀಸ್ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ಜಿಲ್ಲೆಯ ವಾಹನ ಸವಾರರು ಬರೋಬರಿ 9.73 ಕೋಟಿ ರೂ.ಗಳಿಗೂ ಅಧಿಕ ದಂಡ ಪಾವತಿ ಮಾಡಿರುವುದು ಗಮನಾರ್ಹವಾಗಿದೆ. ಇದರಲ್ಲಿ ಹೆಲ್ಮೆಟ್ ರಹಿತ ಚಾಲನೆ ಮಾಡಿರುವ ಪ್ರಕರಣಗಳು ಹೆಚ್ಚಾಗಿದೆ. ಯುವಜನತೆ ನಗರದಲ್ಲಿ ಸಿಗ್ನಲ್ ಪಾಲಿಸದೆ ಹೋಗುವುದು, ರಸ್ತೆಗಳಲ್ಲಿ ಅತೀ ವೇಗವಾಗಿ ವಾಹನ ಚಲಾಯಿಸುವುದು, ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳಲ್ಲೂ ದಂಡಕ್ಕೆ ಗುರಿಯಾಗುತ್ತಿದ್ದಾರೆ. ದಂಡ ಕಟ್ಟುವುದು ಬರೀ ಹಣದ ನಷ್ಟವಲ್ಲ, ಇದು ಪ್ರಾಣಾಪಾಯದ ಎಚ್ಚರಿಕೆ ಎಂಬ ಭಾವನೆ ಸವಾರದಲ್ಲಿ ಮೂಡುತ್ತಿಲ್ಲ.
ವರ್ಷವಾರು ಹೆಲ್ಲೆಟ್ ಧರಿಸದ ಪ್ರಕರಣ ಮತ್ತು ಸಂಗ್ರಹವಾದ ದಂಡದ ಮೊತ್ತ:
- 2020ರಲ್ಲಿ 43,557 ಪ್ರಕರಣಗಳ 2.18 ಕೋಟಿ ರೂ. ದಂಡ ಸಂಗ್ರಹ
- 2021ರಲ್ಲಿ 31,376 ಪ್ರಕರಣಗಳ 1.57 ಕೋಟಿ ರೂ.
- 2022ರಲ್ಲಿ 21,095 ಪ್ರಕರಣಗಳ 1.05 ಕೋಟಿ ರೂ.
- 2023ರಲ್ಲಿ 36,530 ಪ್ರಕರಣಗಳ 1.81 ಕೋಟಿ ರೂ.
- 2024ರಲ್ಲಿ 35,696 ಪ್ರಕರಣಗಳ 1.78 ಕೋಟಿ ರೂ.
- 2025ರಲ್ಲಿ 26,593 ಪ್ರಕರಣಗಳ 1.34 ಕೋಟಿ ರೂ.
ಒಟ್ಟು 6 ವರ್ಷಗಳಲ್ಲಿ 1,94,847 ಪ್ರಕರಣಗಳ 9.73 ಕೋಟಿ ರೂ. ದಂಡ ಸಂಗ್ರಹವಾಗಿದೆ.
Laxmi News 24×7