Breaking News

ಬೆಳಗಾವಿ | ದೇಶದ ಅತಿದೊಡ್ಡ ರಾಬರಿ ಪ್ರಕರಣ ಬೆಳಕಿಗೆ – ಚಲಾವಣೆ ಇಲ್ಲದ 400 ಕೋಟಿ ದರೋಡೆ

Spread the love

ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರಕ್ಕೆ  ಸಾಗಿಸುತ್ತಿದ್ದ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಿಷೇಧಿತ 2,000 ರೂ. ಮುಖಬೆಲೆಯ ನೋಟುಗಳಿದ್ದ ಎರಡು ಕಂಟೇನರ್‌ಗಳನ್ನ ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ಹೈಜಾಕ್ ಮಾಡಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ದರೋಡೆ ಪ್ರಕರಣ  ಅಂತಾರಾಜ್ಯ ಮಟ್ಟದ್ದಾಗಿದ್ದು, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ 3 ರಾಜ್ಯಗಳ ಪೊಲೀಸರು ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುತ್ತಿದ್ದಾರೆ.

ದರೋಡೆ ನಡೆದಿದ್ದು ಯಾವಾಗ?
ಗೋವಾದಿಂದ (Goa) ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 400 ಕೋಟಿ ರೂ. ನಗದು ತುಂಬಿದ್ದ ಎರಡು ಕಂಟೇನರ್‌ಗಳು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಪ್ರದೇಶದಲ್ಲಿ ಹೈಜಾಕ್ ಆಗಿರುವುದು ತಡವಾಗಿ ಬೆಳಕಿಗೆ ಬಂದಿದೆ. 2025ರ ಅಕ್ಟೋಬರ್ 16 ರಂದು ಈ ದರೋಡೆ ನಡೆದಿದೆ. ಘಟನೆ ನಡೆದು ಹಲವಾರು ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿರುವುದು ಮೂರು ರಾಜ್ಯಗಳ ಪೊಲೀಸರಲ್ಲಿ ತೀವ್ರ ಅಚ್ಚರಿ ಉಂಟುಮಾಡಿದೆ. ಜೊತೆಗೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಹಣ ಯಾರಿಗೆ ಸೇರಿದ್ದು?
ಭಾರೀ ಮೊತ್ತದ ಹಣವು ಮಹಾರಾಷ್ಟ್ರದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿದ್ದು ಎಂಬುದು ಮಹಾರಾಷ್ಟ್ರ ಪೊಲೀಸ್‌ ಮೂಲಗಳಿಂದ ಗೊತ್ತಾಗಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗುತ್ತಿದ್ದ 2 ಕಂಟೇನರ್‌ಗಳು, ಖಾನಾಪುರ ತಾಲೂಕಿನ ಅಪಾಯಕಾರಿ ಹಾಗೂ ಅರಣ್ಯ ಪ್ರದೇಶವಾದ ಚೋರ್ಲಾ ಘಾಟ್ ಮಾರ್ಗದಲ್ಲಿ ಏಕಾಏಕಿ ನಾಪತ್ತೆಯಾಗಿವೆ. ಈ ಕಂಟೇನರ್‌ಗಳಲ್ಲಿ 400 ಕೋಟಿ ರೂ.ಗಿಂತಲೂ ಅಧಿಕ ನಗದು ಹಣ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಇದೀಗ ಅಧಿಕೃತ ದಾಖಲೆಗಳಲ್ಲಿ ಉಲ್ಲೇಖವಾಗಿದೆ.

ರಹಸ್ಯ ಬಯಲಾಗಿದ್ದು ಹೇಗೆ?
ಕಂಟೇನರ್ ಹೈಜಾಕ್ ಪ್ರಕರಣ ನಡೆದ ಕೆಲ ದಿನಗಳ ಬಳಿಕ, ನಾಸಿಕ್ ಮೂಲದ ಸಂದೀಪ್ ಪಾಟೀಲ ಎಂಬಾತನನ್ನ ಮಹಾರಾಷ್ಟ್ರದ ರಿಯಲ್‌ ಎಸ್ಟೇಟ್‌ ಕಿಶೋರ್ ಶೇಟ್ ಸಹಚರರು ಗನ್ ಪಾಯಿಂಟ್‌ನಲ್ಲಿ ಅಪಹರಿಸಿದ್ದರು. ನಂತರ ಸಂದೀಪ್‌ನನ್ನ ಸುಮಾರು ಒಂದೂವರೆ ತಿಂಗಳ ಕಾಲ ಅಕ್ರಮ ಬಂಧನದಲ್ಲಿಟ್ಟು, ಕಂಟೇನರ್ ಹೈಜಾಕ್‌ಗೆ ನೀನೇ ಕಾರಣ ಅಂತ ಚಿತ್ರಹಿಂಸೆ ಕೊಟ್ಟಿದ್ದರು.

ಹಣ ಕೊಡದಿದ್ರೆ ಜೀವ ಉಳಿಯಲ್ಲ ಅಂತ ಬೆದರಿಕೆ
ಅಷ್ಟೇ ಅಲ್ಲ 400 ಕೋಟಿ ಹಣ ಕೊಡದಿದ್ದರೆ ಜೀವ ಉಳಿಯೋದಿಲ್ಲ ಎಂದು ಬೆದರಿಕೆ ಹಾಕಿ, ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡಿದ್ದರು. ನಂತರ ಅಪಹರಣಕಾರರಿಂದ ತಪ್ಪಿಸಿಕೊಂಡ ಸಂದೀಪ್ ಪಾಟೀಲ, ಮಹಾರಾಷ್ಟ್ರದ ನಾಸಿಕ್ ಪೊಲೀಸ್ ಠಾಣೆಗೆ ತೆರಳಿ 2026, ಜ.1ರಂದು ದೂರು ದಾಖಲಿಸಿದ್ದಾನೆ. ಈ ದೂರಿನಲ್ಲಿ 400 ಕೋಟಿ ರೂ. ನಗದು ಸಾಗಿಸುತ್ತಿದ್ದ ವಾಹನ ಅಪಹರಣದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಜೊತೆಗೆ, ಇದೇ ದೂರಿನ ಆಧಾರದಲ್ಲಿ ಈವರೆಗೂ ಗುಪ್ತವಾಗಿದ್ದ ಕಂಟೇನರ್ ಹೈಜಾಕ್ ಪ್ರಕರಣ ಸಂಪೂರ್ಣ ಬಹಿರಂಗವಾಗಿದೆ. ತಕ್ಷಣ ಮಹಾರಾಷ್ಟ್ರ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿ, ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಇನ್ನೂ ಇಬ್ಬರು ಪ್ರಮುಖ ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಉಳಿದ ಇಬ್ಬರ ಬಂಧನವಾದ ಬಳಿಕವೇ ಕಂಟೇನರ್‌ಗಳು ಹಾಗೂ ಹಣ ಪತ್ತೆಯಾಗುವ ಸಾಧ್ಯತೆ ಇದೆ.

ಎಸ್‌ಐಟಿ ರಹಿಸಿದ ʻಮಹಾʼ ಸರ್ಕಾರ
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್‌ ಎಸ್‌ಐಟಿ ರಚಿಸಿ ಆದೇಶ ಹೊರಡಿಸಿದ್ದಾರೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಹಣ ಬಳಕೆ ಆಗಿರುವ ಸಾಧ್ಯತೆಯೂ ಇದೆ ಅನ್ನೋ ಅನುಮಾನ ದಟ್ಟವಾಗಿದೆ.


Spread the love

About Laxminews 24x7

Check Also

ಬೆಳಗಾವಿ : ದೈವಜ್ಞ ಜ್ಯುವೆಲ್ಲರ್ಸ್ ಅಸೋಸಿಯೇಶನ್ ನೂತನ ಪದಾಧಿಕಾರಿಗಳ ಆಯ್ಕೆ

Spread the loveಬೆಳಗಾವಿ : ದೈವಜ್ಞ ಜ್ಯುವೆಲ್ಲರ್ಸ್ ಅಸೋಸಿಯೇಷನ್‌ನ 9ನೇ ವಾರ್ಷಿಕ ಮಹಾಸಭೆ ಬೆಳಗಾವಿಯ ಶಹಾಪುರದ ದೈವಜ್ಞ ಮಂಗಲ ಕಾರ್ಯಾಲಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ