ಬೆಳಗಾವಿಯ ಮೋದಗಾ ಗ್ರಾಮದಲ್ಲಿ ಅಪ್ಪಟ ನೈಸರ್ಗಿಕ ಬೆಲ್ಲದ ಘಮಲು ..!
ಸಾಂಪ್ರದಾಯಿಕ ಬೆಲ್ಲಕ್ಕೆ ವಿದೇಶಗಳಲ್ಲೂ ಭಾರಿ ಬೇಡಿಕೆ..!
ಮೋದಗಾದಲ್ಲಿ 45 ವರ್ಷದ ಬೆಲ್ಲದ ಪರಂಪರೆ ಜೀವಂತಅಮೆರಿಕ, ಇಂಗ್ಲೆಂಡ್’ಗೂ ತಲುಪುತ್ತಿದೆ ಮೋದಗಾ ಬೆಲ್ಲಯಾವುದೇ ರಾಸಾಯನಿಕವಿಲ್ಲದ ಅಪ್ಪಟ ನೈಸರ್ಗಿಕ ಬೆಲ್ಲಆರೋಗ್ಯ ವೃದ್ಧಿಸುವ ಬೆಲ್ಲಕ್ಕೆ ವಿದೇಶದಲ್ಲೂ ಬೇಡಿಕೆ
ಆಧುನಿಕ ಯುಗದಲ್ಲಿ ಸಾಂಪ್ರದಾಯಿಕ ಆಲೆಮನೆಗಳು ಮಾಯವಾಗುತ್ತಿರುವ ಬೆನ್ನಲ್ಲೇ, ಬೆಳಗಾವಿ ತಾಲೂಕಿನ ಮೋದಗಾ ಗ್ರಾಮದ ರೈತ ಶಿವಾಜಿ ಅಷ್ಟೇಕರ್ ಅವರು ತಮ್ಮ ಪೂರ್ವಜರ ನೈಸರ್ಗಿಕ ಬೆಲ್ಲ ತಯಾರಿಕೆಯ ಪರಂಪರೆಯನ್ನು ಇಂದಿಗೂ ಜೀವಂತವಾಗಿರಿಸಿದ್ದಾರೆ.
ರಾಸಾಯನಿಕ ಮುಕ್ತವಾದ ಇವರ ಈ ಬೆಲ್ಲಕ್ಕೆ ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲದೆ ವಿದೇಶಗಳಲ್ಲೂ ಭಾರಿ ಬೇಡಿಕೆಯಿದೆ.
ಕಳೆದ 45 ವರ್ಷಗಳಿಂದ ಯಾವುದೇ ಕೆಮಿಕಲ್ ಬಳಸದೆ ಕಬ್ಬಿನ ಹಾಲಿನಿಂದ ಅಪ್ಪಟ ಬೆಲ್ಲ ತಯಾರಿಸುತ್ತಿರುವ ಅಷ್ಟೇಕರ್ ಕುಟುಂಬ, ಕೇವಲ 60 ರೂಪಾಯಿಗೆ ಒಂದು ಕೆಜಿ ಆರೋಗ್ಯಕರ ಬೆಲ್ಲವನ್ನು ಮಾರಾಟ ಮಾಡುತ್ತಿದೆ.
ಕಾರ್ಮಿಕರ ಕೊರತೆಯ ನಡುವೆಯೂ ಗುಣಮಟ್ಟ ಕಾಪಾಡಿಕೊಂಡಿರುವ ಇವರ ಆಲೆಮನೆಯ ಬೆಲ್ಲವನ್ನು ಅಮೆರಿಕ ಹಾಗೂ ಇಂಗ್ಲೆಂಡ್ನಲ್ಲಿ ನೆಲೆಸಿರುವ ಕನ್ನಡಿಗರು ಮುತುವರ್ಜಿಯಿಂದ ಖರೀದಿಸುತ್ತಿರುವುದು ವಿಶೇಷ.
ಈ ಆಲೆಮನೆಯಲ್ಲಿ ಪ್ರತಿದಿನ 15 ರಿಂದ 16 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕಬ್ಬು ಸಂಗ್ರಹಿಸುವುದು, ಕಬ್ಬು ಅರೆಯುವುದು, ಹಾಲು ತೆಗೆಯುವುದು ಮತ್ತು ಕುದಿಸುವುದು ಹೀಗೆ ವಿವಿಧ ಕೆಲಸಗಳನ್ನು ಮಾಡುತ್ತಾರೆ. ಸುತ್ತಮುತ್ತಲಿನ ಬಹುತೇಕ ಆಲೆಮನೆಗಳು ಮುಚ್ಚಿರುವುದರಿಂದ, ಸಾಂಪ್ರದಾಯಿಕ ನೈಸರ್ಗಿಕ ಬೆಲ್ಲ ಉತ್ಪಾದನೆಯನ್ನು ಉಳಿಸಲು ಅಷ್ಟೇಕರ್ ಕುಟುಂಬ ನಿರಂತರವಾಗಿ ಶ್ರಮಿಸುತ್ತಿದೆ. ಕಾರ್ಮಿಕರ ಸಮಸ್ಯೆ ಇದ್ದರೂ, ಆರೋಗ್ಯಕರ ನೈಸರ್ಗಿಕ ಬೆಲ್ಲಕ್ಕೆ ಇಂದಿಗೂ ಬೇಡಿಕೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ.
ತಮ್ಮ ವೃತ್ತಿಯ ಬಗ್ಗೆ ಮಾತನಾಡಿದ ಶಿವಾಜಿ ಅಷ್ಟೇಕರ್, “ನೈಸರ್ಗಿಕ ಬೆಲ್ಲದ ಉತ್ಪಾದನೆಯ ಈ ವ್ಯವಹಾರ ನಮ್ಮ ಪೂರ್ವಜರಿಂದ ನಡೆದು ಬಂದಿದೆ. ಮೋದಗಾ ಗ್ರಾಮವು ಹಿಂದೆ ನೈಸರ್ಗಿಕ ಬೆಲ್ಲಕ್ಕೆ ಪ್ರಸಿದ್ಧವಾಗಿತ್ತು.
ಆದರೆ ಕಾರ್ಮಿಕರ ಸಮಸ್ಯೆಯಿಂದಾಗಿ ಅನೇಕ ಆಲೆಮನೆಗಳು ಮುಚ್ಚಿಹೋಗಿವೆ” ಎಂದರು. ಮುಂದುವರಿದು ಮಾತನಾಡಿದ ಅವರು, “ಇಂದು ಮಾರುಕಟ್ಟೆಯಲ್ಲಿ ಸಕ್ಕರೆ ಮತ್ತು ರಾಸಾಯನಿಕಗಳನ್ನು ಬೆರೆಸಿ ತಯಾರಿಸಿದ ಬೆಲ್ಲ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದೆ, ಆದ್ದರಿಂದ ನಮ್ಮ ನೈಸರ್ಗಿಕ ಬೆಲ್ಲದ ಬೇಡಿಕೆ ಸ್ವಲ್ಪ ಕಡಿಮೆಯಾಗಿದೆ. ಆದರೂ ಸ್ಥಳೀಯ ಗ್ರಾಹಕರೊಂದಿಗೆ ಇಂಗ್ಲೆಂಡ್ ಮತ್ತು ಅಮೆರಿಕಾದಲ್ಲಿ ನೆಲೆಸಿರುವ ಬೆಳಗಾವಿ ಭಾಗದ ನಾಗರಿಕರು ಮುತುವರ್ಜಿಯಿಂದ ನಮ್ಮ ಬೆಲ್ಲವನ್ನು ತೆಗೆದುಕೊಂಡು ಹೋಗುತ್ತಾರೆ” ಎಂದು ಹೇಳಿದರು. ಅಷ್ಟೇಕರ್ ಅವರ ಆಲೆಮನೆಯ ಬೆಲ್ಲ ಸಂಪೂರ್ಣವಾಗಿ ಕಬ್ಬಿನ ಹಾಲಿನಿಂದ ತಯಾರಿಸಲಾಗುತ್ತದೆ.
ಯಾವುದೇ ರಾಸಾಯನಿಕ ಬಳಸದೆ ತಯಾರಾಗುವ ಈ ಬೆಲ್ಲ ಸದ್ಯಕ್ಕೆ ಪ್ರತಿ ಕೆಜಿಗೆ 60 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ. ಗ್ರಾಮದ ಜೊತೆಗೆ ಬೆಳಗಾವಿಯ ರವಿವಾರ ಪೇಟೆ ಮತ್ತು ಎಪಿಎಂಸಿ ಮಾರುಕಟ್ಟೆಯಲ್ಲಿ ಈ ಬೆಲ್ಲದ ಮಾರಾಟ ನಡೆಯುತ್ತದೆ. “ವೈದ್ಯರು ಸಹ ಆರೋಗ್ಯದ ದೃಷ್ಟಿಯಿಂದ ಸಕ್ಕರೆಯ ಬದಲಿಗೆ ಬೆಲ್ಲ ತಿನ್ನಲು ಸಲಹೆ ನೀಡುತ್ತಾರೆ. ನಮ್ಮ ಬೆಲ್ಲ ಕಲಬೆರಕೆ ರಹಿತ ಮತ್ತು ನೈಸರ್ಗಿಕವಾಗಿರುವುದರಿಂದ ಮಧುಮೇಹ ರೋಗಿಗಳು ಸಹ ಮಿತ ಪ್ರಮಾಣದಲ್ಲಿ ಇದನ್ನು ಬಳಸಬಹುದು” ಎಂದು ಶಿವಾಜಿ ಅಷ್ಟೇಕರ್ ಸ್ಪಷ್ಟಪಡಿಸಿದರು.
NEWS CREDITS TO INNEWS BELAGAVI
Laxmi News 24×7