ಬೆಳಗಾವಿ: ಕೆಲವೇ ಜನರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದನ್ನು ನಾನು ಕೂಡಾ ಒಪ್ಪುವುದಿಲ್ಲ. ನಮಗಿರುವ 1 ಕೋಟಿ 25 ಲಕ್ಷ ಮತದಾರರಿಂದ ನಾವು ಶಾಸಕರು, ಮಂತ್ರಿ ಆಗಿದ್ದೇವೆ. ಹಾಗಾಗಿ, ನಮಗೆ ಇತಿಮಿತಿ ಇರಬೇಕು. ಎಲ್ಲವೂ ನನ್ನಿಂದಲೇ ಆಗಿದೆ ಎನ್ನುವುದು ಬಹಳ ತಪ್ಪು ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ಕೊಟ್ಟರು.
ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ಅಧಿಕಾರಕ್ಕೆ ಬರಲು ಬಹಳಷ್ಟು ಜನ ಪ್ರತ್ಯಕ್ಷ, ಪರೋಕ್ಷವಾಗಿ ದುಡಿದಿದ್ದಾರೆ. 1960ರಲ್ಲಿ ತೇನ್ಸಿಂಗ್ ಹಿಮಾಲಯ ಪರ್ವತ ಏರಿದಾಗ ಇಡೀ ಜಗತ್ತಿನ ಎಲ್ಲ ಪತ್ರಿಕೆಗಳು ತೇನ್ಸಿಂಗ್ ಹಿಮಾಲಯ ಏರಿದರು ಎಂದು ಬರೆದರು. ಅವರ ಜೊತೆಗೆ ಇನ್ನೂ 14 ಜನರಿದ್ದರು. ಅವರ ಹೆಸರು ಬರಲಿಲ್ಲ. ಇದೂ ಕೂಡಾ ಹಾಗೇ ಆಗಿದೆ ಎಂದರು.
ಪಕ್ಷ ಅಧಿಕಾರಕ್ಕೆ ಬರಲು ಎಲ್ಲರ ಸಹಕಾರವಿದೆ. ಮೊದಲ ಬಾರಿ ಆರಿಸಿ ಬಂದವರೂ ಸೇರಿ ಬಹಳಷ್ಟು ಶಾಸಕರು ಸಂಕಷ್ಟದಲ್ಲಿದ್ದಾರೆ. ಪಕ್ಷ, ಶಾಸಕರು ಮತ್ತು ಕಾರ್ಯಕರ್ತರ ಶ್ರಮದಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಎನ್ನುವುದನ್ನು ಗಮನಿಸಬೇಕು. ಎಲ್ಲರಿಗೂ ಅಷ್ಟೇ ಪ್ರಾಮುಖ್ಯತೆ ಸಿಗಬೇಕು. ಎಲ್ಲರ ಸಹಕಾರವಿದೆ. ಅಧಿಕಾರಕ್ಕೆ ಬರಲು ಅವರದೇ ಸ್ವಂತ ಎಫರ್ಟ್ ಇದೆ. ಹಾಗಾಗಿ, ಸ್ವಾಭಾವಿಕವಾಗಿ ಎಲ್ಲರೂ ಕ್ಲೈಮ್ ಮಾಡುತ್ತಾರೆ. ಆದರೆ, ಅದರ ಶ್ರೇಯಸ್ಸನ್ನು ಕೆಲವೇ ಜನರು ತೆಗೆದುಕೊಳ್ಳುವುದನ್ನು ನಾವು ಒಪ್ಪುವುದಿಲ್ಲ. ಎಲ್ಲರಿಗೂ ಅಧಿಕಾರ ಸಿಗಬೇಕು. ಡಾ.ಜಿ.ಪರಮೇಶ್ವರ್ ಅವರು 7 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರು ಬಹಳಷ್ಟು ಕಾರ್ಯಕ್ರಮ ಮಾಡಿದ್ದರು ಎಂದು ಹೇಳಿದರು.
ನಾನೂ ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂಬ ಪರಮೇಶ್ವರ್ ಹೇಳಿಕೆಗೆ, ಅವರು ಮುಂಚೆ ಕೂಡ ಹೇಳಿದ್ದಾರೆ. ಅದರಲ್ಲಿ ಏನೂ ತಪ್ಪಿಲ್ಲ. ಹೇಳಿದ್ದು ಸರಿಯಾಗಿದೆ. ನಾವು ಕೂಡ ಆಕಾಂಕ್ಷಿ ಆಗಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ ಸಮುದಾಯದವರೇ ಮುಖ್ಯ ಮತದಾರರು. ಹಾಗಾಗಿ, ಆ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಬೇಕಿದೆ ಎಂದರು.
ಎರಡೂವರೆ ವರ್ಷ ಅಧಿಕಾರ ಹಂಚಿಕೆಯ ವಿಚಾರಕ್ಕೆ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಏನೇ ಮಾತುಕತೆ ಆಗಿದ್ದರೂ ಅದು ದೆಹಲಿಯಲ್ಲಿ ಆಗಿರುತ್ತದೆ. ಬೆಂಗಳೂರಿನಲ್ಲಿ ಆಗಿಲ್ಲ. ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ. ನಮ್ಮ ಉನ್ನತ ಮಟ್ಟದ ನಾಯಕರು ಯಾರಾದರೂ ಕರೆದರೆ ಹೋಗುತ್ತೇವೆ. ಇಲ್ಲದಿದ್ದರೆ ಬೆಳಗಾವಿಯಲ್ಲಿ ಇರುತ್ತೇವೆ ಎಂದು ತಿಳಿಸಿದರು
Laxmi News 24×7