ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೊಸ ಶೀಡೆನೂರು ಗ್ರಾಮದಲ್ಲಿ ಮೂರು ವರ್ಷದ ಹಿಂದೆ ಬಸವಿ ಕರು ಬಿಡಲಾಗಿತ್ತು. ಈ ಕರುವನ್ನು ಎಲ್ಲರೂ ಗೌರಿ ಎಂದು ಮುದ್ದಾಗಿ ಕರೆಯುತ್ತಿದ್ದರು. ಗೌರಿಗೆ ಮೂರು ವರ್ಷ ತುಂಬಿದ್ದರೂ ಗರ್ಭ ಧರಿಸಿಲ್ಲಾ ಎನ್ನುವ ಬೇಸರದಲ್ಲಿದ್ದ ಜನರು ಇದೀಗ ಮರಿ ಗೌರಿಯ ಸಂಭ್ರಮದಲ್ಲಿದ್ದಾರೆ.
ಹಸುವಿಗೆ ಸೀಮಂತ: ಜನರ ಬಯಕೆಯಂತೆ ಗೌರಿ ಗರ್ಭ ಧರಿಸಿದ್ದು, ಗ್ರಾಮಸ್ಥರು ಗೌರಿಗೆ ಸೀಮಂತ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಗೌರಿಗೆ ಅರಿಶಿಣ ಕುಂಕುಮ ಹಚ್ಚಿ, ಹೊಸ ಸೀರೆ ಹಾಕಿ ಆರತಿ ಬೆಳಗಿದರು. ವಿವಿಧ ಭಕ್ಷ್ಯ ಭೋಜನಗಳನ್ನು ಗೌರಿಗೆ ತಿನ್ನಿಸಿದ ಮಹಿಳೆಯರು ಸಂತಸ ವ್ಯಕ್ತಪಡಿಸಿದರು. ಗ್ರಾಮದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಶ್ರಾವಣ ಪೂಜೆಯ ಜೊತೆಗೆ ಗ್ರಾಮಸ್ಥರೆಲ್ಲರೂ ಊರಿಗೆ ಬಿಟ್ಟಿರುವ ದೇವರ ಹಸುವಿನ ಸೀಮಂತ ಕಾರ್ಯ ಮಾಡಿದ್ದಾರೆ. ಗ್ರಾಮ ದೇವಸ್ಥಾನಗಳಿಗೆ ತಳಿರು, ತೋರಣ ಕಟ್ಟಿ ಅಲಂಕರಿಸಲಾಗಿತ್ತು.ಗೌರಿ ಈಗ 8 ತಿಂಗಳ ತುಂಬು ಗರ್ಭಿಣಿ: ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಲಾಗಿತ್ತು. ವೇದಿಕೆಯನ್ನು ತಳಿರು ತೋರಣ, ಬಲೂನ್ಗಳಿಂದ ಅಲಂಕರಿಸಲಾಗಿತ್ತು. ಗೌರಿ 8 ತಿಂಗಳ ಗರ್ಭಿಣಿಯಾಗಿದ್ದು, ಇಡೀ ಗ್ರಾಮಸ್ಥರು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಗೌರಿಗೆ ಬೇಕಾದ ತಿಂಡಿ ತಿನಿಸುಗಳನ್ನು ತಿನ್ನಿಸಿ ಗರ್ಭಿಣಿ ಮಹಿಳೆಯರ ಆರೈಕೆಯಂತೆ ಈಕೆಗೂ ಆರೈಕೆ ಮಾಡಲಾಗುತ್ತಿದೆ. ಸೀಮಂತ ಕಾರ್ಯಕ್ರಮಕ್ಕೆ ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದ ಹೆಣ್ಣು ಮಕ್ಕಳು ಹಸುವಿನ ಪೂಜೆ ಮಾಡಿದರು. ಮನೆಯಿಂದ ವಿಶೇಷವಾದ ಚಕ್ಕಲಿ, ಕೋಡುಬಳೆ, ಕರ್ಚಿಕಾಯಿ, ಅಕ್ಕಿ ಉಂಡಿ ಇನ್ನೂ ನಾನಾ ತರಹದ ಸಿಹಿ ತಿಂಡಿಗಳನ್ನು ಗ್ರಾಮದ ಮಹಿಳೆಯರು ತಂದಿದ್ದರು.