ಚಿಕ್ಕೋಡಿ: ದೇಶದಲ್ಲಿ ಆರ್ಎಸ್ಎಸ್ ಬ್ಯಾನ್ ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ರಾಜಕೀಯ ಹೇಳಿಕೆ ನೀಡಿರಬಹುದು. ಅದರ ಬಗ್ಗೆ ನಾವೇಕೆ ಚರ್ಚೆ ಮಾಡಬೇಕು? ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಹೇಳಿದರು.
ಅಥಣಿ ತಾಲೂಕಿನ ಯಲ್ಲಮ್ಮವಾಡಿ ಗ್ರಾಮದಲ್ಲಿ 140 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರಾಯೋಗಿಕ ಕೆರೆ ತುಂಬುವ ಯೋಜನೆಗೆ ಇಂದು ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅಥಣಿ ಕ್ಷೇತ್ರಕ್ಕೆ ಭರಪೂರ ಅನುದಾನ: ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಸಂದರ್ಭದಲ್ಲಿ ಕರಾರುವಕ್ಕಾಗಿ ಕಾಂಗ್ರೆಸ್ ಅಧ್ಯಕ್ಷರಿಗೆ ಅಥಣಿ ಕ್ಷೇತ್ರದಲ್ಲಿ ನಿಂತು ಹೋಗಿರುವ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದೆ. ಅದರ ಫಲವಾಗಿ ನಾನು ಕೊಟ್ಟಿರುವ ಮನವಿಗಳನ್ನು ಪರಿಶೀಲಿಸಿ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಅನುದಾನ ಬಿಡುಗಡೆಯಲ್ಲಿ ಯಾವುದೇ ಟ್ರಿಕ್ ಇಲ್ಲ ಎಂದು ಹೇಳಿದರು.
ಬಾರದು ಬಪ್ಪದು, ಬಪ್ಪದು ತಪ್ಪದು: ಸಚಿವ ಸ್ಥಾನದ ಕುರಿತು ಕೇಳಿದ ಪ್ರಶ್ನೆಗೆ, ಚುನಾಯಿತರಾದ 224 ಶಾಸಕರಿಗೂ ಮಂತ್ರಿ ಸ್ಥಾನ ಪಡೆಯಬೇಕೆಂಬ ಆಸೆ ಇದ್ದೇ ಇರುತ್ತದೆ. ಸಮಯ, ಸಂದರ್ಭ ಹಾಗೂ ಅವಕಾಶ ಸಿಕ್ಕಾಗ ಸಚಿವ ಸ್ಥಾನ ಬಂದೇ ಬರುತ್ತದೆ. ನಾನು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಸಿಗುವಾಗ ಎಲ್ಲವೂ ಸಿಗುತ್ತದೆ. ‘ಬಾರದು ಬಪ್ಪದು, ಬಪ್ಪದು ತಪ್ಪದು’ ಎಂದು ಮಾರ್ಮಿಕವಾಗಿ ನುಡಿದರು.
ಸಂಪೂರ್ಣ 5 ವರ್ಷ ನಾನೇ ಸಿಎಂ ಆಗಿರ್ತೇನೆ ಎಂದಿರುವ ಸಿದ್ದರಾಮಯ್ಯನವರ ಹೇಳಿಕೆಗೆ, ಸಿಎಂ ನಿನ್ನೆ ಈ ಹೇಳಿಕೆ ನೀಡಿದ್ದು, ಡಿಸಿಎಂ ಕೂಡ ಪ್ರತಿಕ್ರಿಯಿಸಿದ್ದಾರೆ. ಇದರ ಮಧ್ಯೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಮಾತನಾಡದಂತೆ ಕಿವಿಮಾತು ಹೇಳಿದ್ದರಿಂದ ಈ ಬಗ್ಗೆ ನಾನು ಏನನ್ನೂ ಹೇಳಲಾರೆ ಎಂದರು.