ಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ ಬಳಿಕ ಇಂದು ಕರ್ತವ್ಯಕ್ಕೆ ಹಾಜರಾದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿರುವ ಅವರ ಕಚೇರಿಗೆ ಆಗಮಿಸಿದ ಎಎಸ್ಪಿ ಎನ್.ವಿ.ಭರಮನಿ, ಎಂದಿನಂತೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಎಸ್ಪಿ ಡಾ.ಗೋಪಾಲ ಬ್ಯಾಕೋಡ ಅವರೊಂದಿಗೆ ಚರ್ಚಿಸಿದ ಬಳಿಕ ಕಚೇರಿಗೆ ಆಗಮಿಸಿದ ಅವರು, ಮಾಧ್ಯಮದವರೊಂದಿಗೆ ಮಾತನಾಡಿದರು.
“ಹಿರಿಯ ಅಧಿಕಾರಿಗಳು ನನ್ನೊಂದಿಗೆ ಮಾತನಾಡಿದ್ದಾರೆ. ನಾನು ಶಿಸ್ತಿನ ಇಲಾಖೆಯಲ್ಲಿದ್ದೇನೆ. ಸಿಎಂ ಸಾಹೇಬ್ರು ಹಾಗೂ ಗೃಹ ಸಚಿವರು ಮಾತನಾಡಿದ್ದಾರೆ. ನಾನು ಯಾವಾಗಲೂ ಮಾಧ್ಯಮಕ್ಕೆ ಮಾತನಾಡಿಲ್ಲ. ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ” ಎಂದರು.
ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿಲ್ಲ-ಸಿಎಂ: ಭರಮನಿ ಅವರಿಗೆ ದೂರವಾಣಿ ಕರೆ ಮಾಡಿ ಸಮಾಧಾನಪಡಿಸಿದ ಸಿಎಂ, “ಸ್ವಯಂನಿವೃತ್ತಿ ನಿರ್ಧಾರ ಬೇಡ. ಅದನ್ನು ವಾಪಸ್ ಪಡೆಯಿರಿ. ನಾನು ಅಂದು ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿಲ್ಲ. ನಿಮಗೆ ಅಗೌರವ ತೋರಬೇಕು ಎಂದು ಮಾಡಿದ್ದಲ್ಲ. ಅಪಮಾನ ಮಾಡುವ ಉದ್ದೇಶ ನನಗಿರಲಿಲ್ಲ” ಎಂದು ಮನವರಿಕೆ ಮಾಡಿದ್ದಾರೆ.
ನೋವಾಗಿದ್ದರೆ ಕ್ಷಮಿಸಿ-ಸಿಎಂ: “ಅಂದು ಕಾಂಗ್ರೆಸ್ ನಡೆಸಿದ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಹಾಗಾಗಿ ಕೋಪ ಬಂದು ಮಾತನಾಡಿದ್ದೇನೆ. ಯಾವುದೇ ಬೇಸರ ಮಾಡಿಕೊಳ್ಳಬೇಡಿ. ರಾಜೀನಾಮೆ ವಾಪಸ್ ಪಡೆದುಕೊಳ್ಳಿ. ನೋವಾಗಿದ್ದರೆ ಕ್ಷಮಿಸಿ ಎಂದು ಸಮಾಧಾನಪಡಿಸಿದ್ದಾರೆ” ಎಂದು ತಿಳಿದು ಬಂದಿದೆ.
ಕೈ ಎತ್ತಿ ರೇಗಿದ್ದ ಸಿಎಂ: ಏ.28ರಂದು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನಗೊಂಡು, ವೇದಿಕೆಯಲ್ಲೇ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿ.ಭರಮನಿ ಅವರಿಗೆ ಕೈ ಎತ್ತಿ ರೇಗಿದ್ದರು. ಸ್ವಯಂ ನಿವೃತ್ತಿ ಕೋರಿ ಗೃಹ ಇಲಾಖೆಗೆ ಒಂದು ತಿಂಗಳ ಹಿಂದೆ ಭರಮನಿ ಅವರು ಮನವಿ ಸಲ್ಲಿಸಿದ್ದರು.
ಮನುಷ್ಯ ಅಂದ್ಮೇಲೆ ಸಿಟ್ಟು ಸ್ವಾಭಾವಿಕ- ಅಶೋಕ್ ಪಟ್ಟಣ್: ಈ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಅಶೋಕ್ ಪಟ್ಟಣ್, “ಸಿಎಂ ಸಿದ್ದರಾಮಯ್ಯನವರು ಅವರಿಗೆ ಹೊಡೆಯೋಕೆ ಹೋಗಿರಲಿಲ್ಲ. ಮನುಷ್ಯ ಅಂದ ಮೇಲೆ ಸ್ವಾಭಾವಿಕವಾಗಿ ಸಿಟ್ಟು ಬರುತ್ತೆ ಅಷ್ಟೇ. ಕಾರ್ಯಕ್ರಮದಲ್ಲಿ ಪ್ರೊಟೆಸ್ಟ್ ಮಾಡುವಾಗ ಕರೆದು ಕೇಳಿದ್ದಾರೆ. ಹೊಡೆದಿಲ್ಲ, ಬೈದಿಲ್ಲ. ಈ ಘಟನೆಯಾಗಿ ಎರಡು, ಮೂರು ತಿಂಗಳಾಯ್ತು” ಎಂದು ಸಮರ್ಥಿಸಿಕೊಂಡರು.