ಬೆಂಗಳೂರು, (ಫೆಬ್ರವರಿ 03): ಕರ್ನಾಟಕದಲ್ಲಿಂದು (ಫೆಬ್ರವರಿ 03) ಒಂದೇ ದಿನ ಬರೋಬ್ಬರಿ ಏಳು ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ ಐದು ಜನರು ಸಾಲಬಾಧೆಯಿಂದ ಸಾವಿನ ಹಾದಿ ತುಳಿದಿದ್ದರೆ,. ಸಾಲಬಾಧೆಯಿಂದ ಚಿಕ್ಕಬಳ್ಳಾಪುರದಲ್ಲಿ ಇಬ್ಬರು, ಹಾಸನ-1 , ಬೀದರ್-1, ದಾವಣಗೆರೆ ಜಿಲ್ಲೆಯಲ್ಲಿ ಓರ್ವ ರೈತ ಸಾವಿನ ಹಾದಿ ತುಳಿದಿದ್ದಾರೆ. ಇನ್ನು ತುಮಕೂರಿನ ವ್ಯಕ್ತಿ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಇನ್ನು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗೆಳೆಯ ಮೋಸ ಮಾಡಿದ್ದಾನೆಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಾಯಿ ಮಾಡಿದ ಸಾಲಕ್ಕೆ ಹೆದರಿ ಪುತ್ರ ಆತ್ಮಹತ್ಯೆ
ಬೀದರ್: ಕೃಷಿಗಾಗಿ ತಾಯಿ ಮಾಡಿದ ಸಾಲದಿಂದ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ (Bidar) ಜಿಲ್ಲೆಯ ಚಿಟಗುಪ್ಪ ತಾಲೂಕಿನ ರಾಂಪೂರ್ ಗ್ರಾಮದಲ್ಲಿ ನಡೆದಿದೆ. ಗಣೇಶ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಗಣೇಶ್ ತಾಯಿ ಕೃಷಿಗಾಗಿ ಬ್ಯಾಂಕ್‌ನಲ್ಲಿ ಐದು ಲಕ್ಷ ಸಾಲ ಮಾಡಿದ್ದರು. ಇನ್ನೂ ಗಣೇಶ್ ಕೃಷಿಯನ್ನು ತಾವೇ ನೋಡಿಕೊಳ್ಳುತ್ತಿದ್ದರು. ಬಂದ ಸಾಲದಿಂದ ತೊಗರಿ ಬಿತ್ತನೆ ಮಾಡಿದ್ದರು. ಆದರೆ ಬೆಳೆ ಫಲವತ್ತಾಗಿ ಬರದೇ ಹಾಳಾಗಿ ಹೋಗಿತ್ತು. ಹೀಗಾಗಿ ಸಾಲ ಮರುಪಾವತಿಸಲು ಸಾಧ್ಯವಾಗದೇ ಮನನೊಂದು ಗಣೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನ: ಇನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ರೈತರೊಬ್ಬರು ಆತ್ಮಹತ್ಯೆ ಹಾದಿ ತುಳಿದಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕಂಟೇನಹಳ್ಳಿ ಗ್ರಾಮದ ರೈತ ಕೆ.ಡಿ.ರವಿ(50) ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಮಸ್ತ ಫೈನಾನ್ಸ್ ಬಳಿ 70 ಸಾವಿರ, ಚೈತನ್ಯ ಫೈನಾನ್ಸ್ 60 ಸಾವಿರ, BSS ಬಳಿ ₹60 ಸಾವಿರ, L&T 65 ಸಾವಿರ ಸೇರಿ 9 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದ. ಸಾಲದ ನಡುವೆ ಶುಂಠಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ. ಇದರ ಮಧ್ಯ ಸಾಲದ ಹಣ ಪಾವತಿಸುವಂತೆ ಒತ್ತಡಗಳು ಹೆಚ್ಚಾಗಿದ್ದವು. ಇದರಿಂದ ರೈತ ರವಿ ಸಾವಿನ ಹಾದಿ ಹಿಡಿದಿದ್ದಾನೆ.