ಶಿವಮೊಗ್ಗ: ಇ-ಖಾತೆ ಮಾಡಿಕೊಡಲು 5 ಸಾವಿರ ರೂಪಾಯಿ ಲಂಚ ಪಡೆಯುವಾಗ ಸೊರಬ ತಾಲೂಕು ಇಂಡುವಳ್ಳಿಯ ಪ್ರಭಾರ ಪಿಡಿಒ ಈಶ್ವರಪ್ಪ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಹಮ್ಮದ್ ಗೌಸ್ ಎಂಬುವರು ಇಂಡುವಳ್ಳಿಯಲ್ಲಿ ಜಮೀನು ಹೊಂದಿದ್ದು, ಇದರಲ್ಲಿ ಒಂದು ಮನೆಯನ್ನು ಕಟ್ಟಿಕೊಂಡಿದ್ದಾರೆ. ಈ ಮನೆಯ ಮೇಲೆ ಬ್ಯಾಂಕ್ನಲ್ಲಿ ಸಾಲ ಪಡೆಯಲು ಇ-ಖಾತೆ ಬೇಕಾಗಿರುವುದರಿಂದ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಪ್ರಭಾರ ಪಿಡಿಒ ಅವರು ಮಹಮ್ಮದ್ ಗೌಸ್ ಅವರ ಮನೆ ಬಳಿ ಬಂದು ಅಳತೆ ಮಾಡಿಕೊಂಡಿದ್ದರು. ಇದಾದ ನಂತರ ಹಲವು ಬಾರಿ ಪ್ರಭಾರಿ ಪಿಡಿಒ ಈಶ್ವರಪ್ಪ ಅವರ ಬಳಿ ಬಂದು ಕೇಳಿದಾಗ ಅವರು ಇ-ಖಾತೆ ನೀಡದೆ ಸತಾಯಿಸಿದ್ದರು. ಈ ಕುರಿತು ಮೊನ್ನೆ ಪಿಡಿಒ ಈಶ್ವರಪ್ಪ ಅವರ ಬಳಿ ಬಂದಾಗ ಅವರು 5 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಅಂದು ಲಂಚ ನೀಡದ ಗೌಸ್, ಲೋಕಾಯುಕ್ತ ಅಧಿಕಾರಿಗಳ ಬಳಿ ತೆರಳಿ ದೂರು ನೀಡಿದ್ದರು.
ಇಂದು ಸೊರಬ ಪಟ್ಟಣದ ಪೋಸ್ಟ್ ಆಫೀಸ್ ಬಳಿ ಪ್ರಭಾರ ಪಿಡಿಒ ಈಶ್ವರಪ್ಪ ಗೌಸ್ ಕಡೆಯಿಂದ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಕುರಿತು ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ಹೆಚ್. ಎಸ್. ಸುರೇಶ್ ಅವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Laxmi News 24×7