ಬೆಳಗಾವಿ: “ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆ ಖಂಡನೀಯ. ಇಡೀ ವಿಶ್ವ ಅಂಬೇಡ್ಕರ್ ಬಗ್ಗೆ ಪ್ರಶಂಸೆಯಿಂದ ಮಾತನಾಡುತ್ತದೆ. ಪ್ರಜಾಪ್ರಭುತ್ವಕ್ಕೆ ಸಂವಿಧಾನ ಕೊಡುವ ಮೂಲಕ ದೇಶವನ್ನು ಒಗ್ಗೂಡಿಸಿದವರು ಅಂಬೇಡ್ಕರ್. ಅವರ ಬಗ್ಗೆ ಲಘುವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆ ಕೇಳಬೇಕು. ಹಾಗೂ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕು” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸುವರ್ಣಸೌಧದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ಆರೋಪ ವಿಚಾರವಾಗಿ ಮಾತನಾಡಿ, “ನಾನು ಇದನ್ನು ಖಂಡಿಸುತ್ತೇನೆ. ಇದು ಅಂಬೇಡ್ಕರ್ ಅವರ ವ್ಯಕ್ತಿತ್ವದ ಪ್ರಶ್ನೆ. ಅಂಬೇಡ್ಕರ್ ಅವರು ಗಾಂಧೀಜಿಯವರ ಜೊತೆಗೂ ಭಿನ್ನಾಭಿಪ್ರಾಯ ಇಟ್ಟುಕೊಂಡಿದ್ದರು. ಆದರೆ, ಇವರು ಅಂಬೇಡ್ಕರ್ ಅವರ ವ್ಯಕ್ತಿತ್ವದ ಬಗ್ಗೆ ಮಾತಾಡಿದ್ದು, ನಮಗೆ ನೋವಾಗಿದೆ. ಹೀಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಅಂಬೇಡ್ಕರ್ ಕೂಡಾ ನಮಗೆ ದೇವರೇ. ಅವರನ್ನು ಪೂಜ್ಯ ಭಾವನೆಯಿಂದ ನೋಡುವ ಕೋಟ್ಯಂತರ ಜನ ಇದ್ದಾರೆ. ಅಮೆರಿಕ, ಯು.ಕೆಯಲ್ಲಿ ಅವರ ಪ್ರತಿಮೆ ಇಟ್ಟಿದಾರೆ” ಎಂದು ಅಮಿತ್ ಶಾ ಅವರಿಗೆ ಕಿವಿಮಾತು ಹೇಳಿದರು.