ವಿಜಯಪುರ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಾಗೂ ವಿವಿಧ ಮಠಾಧೀಶರು ಶನಿವಾರ ಹೊಸದಾಗಿ “ಕ್ರಾಂತಿವೀರ ಬ್ರಿಗೇಡ್” ಘೋಷಿಸಿದರು. ವಿಜಯಪುರ ತಾಲೂಕಿನ ಮಖಣಾಪುರ ಸೋಮನಾಥ ಸ್ವಾಮೀಜಿ ಅವರನ್ನು ಬ್ರಿಗೇಡ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಹಿಂದುಳಿದ ಮತ್ತು ದಲಿತರು ಸೇರಿ ಸಕಲ ಹಿಂದೂ ಧರ್ಮ ಸಮಾಜದ ಸಂಘಟನೆ ಮಾಡಬೇಕು ಎಂಬುವುದು ಎಲ್ಲ ಸ್ವಾಮೀಜಿಗಳ ಉದ್ದೇಶವಾಗಿದೆ. ಈ ಬ್ರಿಗೇಡ್ ಸ್ಥಾಪನೆಯು ಕಾಂತ್ರಿಕಾರಿ ನಿರ್ಧಾರ. ಬಸವನ ಬಾಗೇವಾಡಿಯಲ್ಲಿ ಫೆಬ್ರವರಿ 4ರ ರಥಸಪ್ತಮಿ ದಿನದಂದು ಇದರ ಉದ್ಘಾಟನೆ ನಡೆಯಲಿದೆ ಎಂದು ಈಶ್ವರಪ್ಪ ತಿಳಿಸಿದರು.
ಅರಕೇರಿಯ ಅಮೋಘ ಸಿದ್ದೇಶ್ವರ ಮಠದಲ್ಲಿ ನಡೆದ ಮಹತ್ವದ ಸಭೆಯಲ್ಲಿ “ಕ್ರಾಂತಿವೀರ” ಹೆಸರಲ್ಲಿ ಬ್ರಿಗೇಡ್ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ನಂತರ ಸ್ವಾಮೀಜಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಬ್ರಿಗೇಡ್ ಸಂಬಂಧ ಇದು ಮೂರನೇ ಸಭೆಯಾಗಿದೆ. ಈ ಸಭೆಯಲ್ಲಿ ಸುಮಾರು 50 ಸ್ವಾಮೀಜಿಗಳು ಸೇರಿದ್ದರು. ತಕ್ಷಣದಿಂದಲೇ ರಾಜ್ಯದಲ್ಲಿ ಪ್ರವಾಸ ಮಾಡಲಾಗುತ್ತದೆ. ಫೆ.4ರಂದು ಎಲ್ಲ ಸಮಾಜದ ಸ್ವಾಮಿಗಳ ಪಾದತೊಳೆದು ಪೂಜೆ ಮಾಡುವ ಮೂಲಕ ಬ್ರಿಗೇಡ್ ಉದ್ಘಾಟಿಸಲಾಗುತ್ತದೆ. ಬಸವೇಶ್ವರರ ಹುಟ್ಟಿದ ನಾಡು ಬಸವನಬಾಗೇವಾಡಿಯಲ್ಲಿ ಈ ಹಿಂದೂ ಸಂಘಟನೆಯ ಕಾರ್ಯಕ್ರಮ ಆರಂಭವಾಗಲಿದೆ. ಎಲ್ಲ ಸಮಾಜಗಳ ಸ್ವಾಮೀಜಿಗಳು ಹಾಗೂ ಭಕ್ತರು ಪಾಲ್ಗೊಳ್ಳುವರು. ನಿರೀಕ್ಷೆಗೂ ಮೀರಿದ ಬೆಂಬಲ ಸಿಗುವ ವಿಶ್ವಾಸ ಇದೆ ಎಂದರು.
Laxmi News 24×7