ಮೈಸೂರು: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದ “ಮೈಸೂರು ಸಂಗೀತ ಸುಗಂಧ’ ಕರ್ನಾಟಕ ಶಾಸ್ತ್ರೀಯ ಸಂಗೀತದ ದಾಸ ಪರಂಪರೆಯ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಯುವಕನೋರ್ವ, ಮಹಾರಾಷ್ಟ್ರ ಚುನಾವಣೆಯಲ್ಲಿ ನೀವು ಗ್ಯಾರಂಟಿ ಘೋಷಿಸ ಬೇಡಿ ಎಂದು ಘೋಷಣೆ ಕೂಗಿದ್ದು ವೇದಿಕೆಯಲ್ಲಿದ್ದವರು ಒಂದು ಕ್ಷಣ ತಬ್ಬಿಬ್ಬಾದ ಪ್ರಸಂಗ ಜರುಗಿತು.
ಕಾರ್ಯಕ್ರಮ ಮುಗಿಯುವ ಹಂತದಲ್ಲಿ ವಂದನಾನರ್ಪಣೆ ನಡೆಯುತ್ತಿದ್ದ ವೇಳೆ ಹೋಟೆಲೊಂದರಲ್ಲಿ ಕೆಲಸ ಮಾಡುವ ರವಿ ಎಂಬಾತ ವೇದಿಕೆ ಮುಂಭಾಗ ಬಂದು, ನಾನೊಬ್ಬ ಸಾಮಾನ್ಯ ನಾಗರಿಕ, ಕರ್ನಾಟಕ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದೆ. ನೀವು ಮಹಾರಾಷ್ಟ್ರ ಚುನಾವಣೆಯಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಬೇಡಿ. ಕರ್ನಾಟಕವನ್ನು ಲೂಟಿಯಿಂದ ರಕ್ಷಿಸಿ ಎಂದು ನಿರ್ಮಲಾ ಸೀತಾರಾಮನ್ ಅವರಿಗೆ ಅರ್ಧಂಬರ್ಧ ಹಿಂದಿಯಲ್ಲಿ ಮನವಿ ಮಾಡಿದ.
ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಹಿಡಿದುಕೊಂಡು ಹೊರಗಡೆಗೆ ಕರೆದುಕೊಂಡು ಹೋಗಲು ಮುಂದಾದರು. ಆಗ ನಿರ್ಮಲಾ ಸೀತಾರಾಮನ್ ಹಾಗೂ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಇತರ ಗಣ್ಯರು ಆತನನ್ನು ಬಿಟ್ಟುಬಿಡಿ ಎಂದು ಸೂಚಿಸಿದರು. ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ವೇದಿಕೆ ಮೇಲಿದ್ದ ಗಣ್ಯರು ಒಂದು ಕ್ಷಣ ತಬ್ಬಿಬ್ಬಾದರು. ವೇದಿಕೆಯಲ್ಲಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಮೈಸೂರು -ಕೊಡಗು ಸಂಸದ ಯದುವೀರ್ ಒಡೆಯರ್, ಶಾಸಕ ಶ್ರೀವತ್ಸ ಮುಂತಾದವರಿದ್ದರು.