ಡಂಬಳ: ಶಿಕ್ಷಣ ಸಂಸ್ಥೆ ಮಠದ ಅಭಿವೃದ್ಧಿ ಸೇರಿದಂತೆ ಸಮಾನತೆಗಾಗಿ ನಿರಂತರವಾಗಿ ಶ್ರಮಿಸಿದರು. ಅವರ ಅಸಂಖ್ಯ ಸಾಮಾಜಿಕ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಕೋಮಸೌಹಾರ್ದ ಪ್ರಶಸ್ತಿ ಸೇರಿದಂತೆ ಹಲವು ಗೌರವ ಲಿಂ.ತೋಂಟದ ಸಿದ್ಧಲಿಂಗ ಸ್ವಾಮೀಜಿಗೆ ಸಲ್ಲುತ್ತದೆ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.
ಡಂಬಳ ಗ್ರಾಮದ ಹಜರತ್ ಜಮಾಲ ಶಾ ವಲಿ ಶರಣರ ದರ್ಗಾದ ಆವರಣದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಮತ್ತು ದರ್ಗಾ ಸಮಿತಿ ಆಯೋಜಿಸಿದ್ದ ಲಿಂ.ತೋಂಟದ ಸಿದ್ಧಲಿಂಗ ಸ್ವಾಮೀಜಿಯ 6ನೇ ವರ್ಷದ ಪುಣ್ಯಸ್ಮರಣೋತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ತೋಂಟದ ಸಿದ್ಧಲಿಂಗ ಸ್ವಾಮೀಜಿ ಎಲ್ಲಾ ಧರ್ಮೀಯರ ಮೇಲೆ ಪ್ರೀತಿ ಹೊಂದಿದ್ದರು. ರೊಟ್ಟಿ ಜಾತ್ರೆಯ ಮೂಲಕ ಜಾತೀಯತೆಯನ್ನು ನಿರ್ಮೂಲನೆ ಮಾಡಿ ಪರಸ್ಪರ ಬಾಂಧವ್ಯ ಬೆಸೆಯುವಂತೆ ಮಾಡುವ ಮೂಲಕ ಆಧುನಿಕ ಕಾಲದ ಎರಡನೇ ಬಸವಣ್ಣರಾಗಿ ತಮ್ಮ ಜೀವನ ಕಳೆದರು ಎಂದರು.