Breaking News

ಅರಮನೆಗೆ ಜನರ ಲಗ್ಗೆ

Spread the love

ಮೈಸೂರು: ವಿಜಯದಶಮಿ ಮೆರವಣಿಗೆ ವೀಕ್ಷಣೆ ಪಾಸ್‌ ಇದ್ದವರನ್ನು ಅರಮನೆ ಆವರಣದೊಳಗೆ ಬಿಡಲು ಸಾಕಷ್ಟು ಹೊತ್ತು ಕಾಯಿಸಿದ್ದಲ್ಲದೆ, ಎಲ್ಲ ಆಸನಗಳು ಭರ್ತಿಯಾಗಿವೆ ಎಂದು ಗೇಟ್‌ನಲ್ಲಿನ ಸಿಬ್ಬಂದಿ ತಿಳಿಸಿದ್ದರಿಂದ ಇಲ್ಲಿನ ವರಾಹ ದ್ವಾರದ ಬಳಿ ಶನಿವಾರ ಜನರು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.

 

ಪ್ರವೇಶ ಗೊಂದಲದಿಂದ ಆಕ್ರೋಶಗೊಂಡ ಜನರು ವರಾಹ ದ್ವಾರದ ಗೇಟ್‌ ತಳ್ಳಿ ಒಳ ನುಗ್ಗಿದರು. ಅರಮನೆ ಉದ್ಯಾನದ ಗುಲಾಬಿ ತೋಟದಲ್ಲೆಲ್ಲಾ ಅಡ್ಡಾದಿಡ್ಡಿಯಾಗಿ ಓಡಾಡಿದರು. ಭದ್ರತಾ ಸಿಬ್ಬಂದಿಯೂ ಮೂಕ ಪ್ರೇಕ್ಷಕರಾದರು. ಪಾಸ್‌ ಇದ್ದವರೊಂದಿಗೆ, ಇಲ್ಲದವರೂ ಪ್ರವೇಶ ಗಿಟ್ಟಿಸಿಕೊಂಡರು.

3, 4, 5 ಮತ್ತು 6ನೇ ಗೇಟ್‌ ಸಂಖ್ಯೆ ಮೂಲಕ ಅರಮನೆ ಪ್ರವೇಶಿಸಲು ಪಾಸ್‌ ಪಡೆದಿದ್ದ ಜನರು, ಬೆಳಿಗ್ಗೆ 10ಕ್ಕೆ ವರಾಹ ದ್ವಾರದ ಬಳಿ ಆಗಮಿಸಿದ್ದರು. ಬೆಳಿಗ್ಗೆ 11ರ ಸುಮಾರಿಗೆ ಗೇಟ್‌ ನಂ.3ರಲ್ಲಿನ ಸಿಬ್ಬಂದಿಯು ‘ಒಳಬಿಟ್ಟವರ ಟಿಕೆಟ್‌ಗಳು ಸ್ಕ್ಯಾನ್‌ ಆಗುವುದು ತಡವಾಗುತ್ತಿದೆ. ಅದು ಮುಗಿಯುವವರೆಗೂ ಒಳಬಿಡಲು ಸಾಧ್ಯವಿಲ್ಲ’ ಎಂದು ಜನರಿಗೆ ಹೇಳತೊಡಗಿದರು. ಈ ಗೊಂದಲ ಮಧ್ಯಾಹ್ನ 1 ಗಂಟೆವರೆಗೂ ಮುಂದುವರೆಯಿತು. ಗೋಲ್ಡ್‌ ಕಾರ್ಡ್‌ ಇದ್ದ ಹಲವರು ಅಸಮಾಧಾನ ಹೊರ ಹಾಕುತ್ತಾ ವಾಪಸ್‌ ತೆರಳಿದರು.

ಮಧ್ಯಾಹ್ನ 1.30ರ ಸುಮಾರಿಗೆ ಜನರ ದಟ್ಟಣೆ ಹೆಚ್ಚಾಯಿತು. ಗೇಟ್‌ನಲ್ಲಿದ್ದ ಪೊಲೀಸ್‌ ಸಿಬ್ಬಂದಿಯೊಂದಿಗೆ ಒಳ ಬಿಡುವಂತೆ ಆಗ್ರಹಿಸಿದರು. ಪಾಸ್‌ ಇದ್ದರೂ ಏಕೆ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಗಮನಿಸಿದ ಪೊಲೀಸರು ಮತ್ತಷ್ಟು ಸಿಬ್ಬಂದಿಯನ್ನೂ ನಿಯೋಜಿಸಿದರೂ ಲೆಕ್ಕಿಸದ ಪ್ರವಾಸಿಗರು ಗೇಟ್ ಅನ್ನು ಸ್ವತಃ ತೆಗೆದು ಮುನ್ನುಗ್ಗಿದರು. ಭಾರೀ ನೂಕುನುಗ್ಗಲು ಉಂಟಾಯಿತು. ಒಬ್ಬರು ಗಾಯಗೊಂಡರು.

ಕೆಸರಿನಲ್ಲಿ ಸಾಗಿದ ಪಾಸ್‌ದಾರರು: ಜಯಮಾರ್ತಾಂಡ ದ್ವಾರದಿಂದ ಅರಮನೆ ಒಳಹೋಗಲು ಪ್ರವೇಶ ಕಲ್ಪಿಸಿದ್ದ ಕೋಟೆ ಮಾರಮ್ಮ ದೇವಸ್ಥಾನದ ಬಳಿಯ 2ಎ, 2ಬಿ, 2ಸಿ ಮತ್ತು 2ಡಿ ಗೇಟ್‌ಗಳಲ್ಲಿ ಸಾಗಿದ ಪಾಸ್‌ದಾರರು ಕೆಸರಿನಲ್ಲಿ ಹೆಜ್ಜೆ ಹಾಕಬೇಕಾದ ಸಂಕಷ್ಟ ಎದುರಿಸಿದರು.

ತಗ್ಗಿನ ಜಾಗವಾದ್ದರಿಂದ, ಮಳೆ ನೀರು ನಿಂತು ಉಂಟಾಗಿದ್ದ ಕೆಸರಿನಲ್ಲಿ ಹೀಲ್ಡ್‌ ಚಪ್ಪಲಿಗಳನ್ನು ಧರಿಸಿದ್ದ ಹೆಣ್ಣುಮಕ್ಕಳು ಪ್ರಯಾಸದಿಂದ ಸಾಗಿದರು. ಗೇಟ್‌ ಬಳಿಯಲ್ಲಿದ್ದ ತ್ಯಾಜ್ಯದ ರಾಶಿಯನ್ನೂ ತೆರವು ಮಾಡಿರಲಿಲ್ಲ. ಕೊಳಚೆ ಜಾಗದ ಮೂಲಕ ಸಾಗಬೇಕೇ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಟನಲ್ ರಸ್ತೆ ಯೋಜನೆಗೆ ಬಿಜೆಪಿ ವಿರೋಧ ರಾಜಕೀಯಪ್ರೇರಿತ: ಸಿಎಂ ಸಿದ್ದರಾಮಯ್ಯ

Spread the loveಬೆಂಗಳೂರು: ಟನಲ್ ರಸ್ತೆ ಯೋಜನೆಯನ್ನು ಬಿಜೆಪಿಯವರು ರಾಜಕೀಯ ಉದ್ದೇಶಕ್ಕಾಗಿ ವಿರೋಧಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ಟನಲ್ ರಸ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ