ಮೈಸೂರು: ವಿಜಯದಶಮಿ ಮೆರವಣಿಗೆಯಲ್ಲಿ ಅಂಬಾರಿಗೆ ಪುಷ್ಪಾರ್ಚನೆಯು ಮುಹೂರ್ತ ಮೀರಿದ ಬಳಿಕ ಅಂದರೆ ಅರ್ಧ ತಾಸು ತಡವಾಗಿ ನಡೆದಿದ್ದಕ್ಕೆ ಅಂಬಾರಿಯನ್ನು ಸಿದ್ಧಪಡಿಸುವಲ್ಲಿ ಆದ ವಿಳಂಬವೇ ಕಾರಣ ಎಂದು ಹೇಳಲಾಗುತ್ತಿದೆ.
ಮುಹೂರ್ತದ ಪ್ರಕಾರ, 4ರಿಂದ 4.30ರೊಳಗೆ ವಿಜಯದಶಮಿ ಮೆರವಣಿಗೆಯನ್ನು ಮುಖ್ಯಮಂತ್ರಿ ಉದ್ಘಾಟಿಸಬೇಕಿತ್ತು.
ಆದರೆ, ಅದು ನಡೆದಾಗ 5 ಗಂಟೆ 2 ನಿಮಿಷ ಆಗಿತ್ತು. ಇದಕ್ಕೆ, ರಾಜವಂಶಸ್ಥರಿಂದ ಅಂಬಾರಿಯು ವಿಳಂಬವಾಗಿ ದೊರೆತಿದ್ದು ಕಾರಣ ಎಂದು ಹೇಳಲಾಗುತ್ತಿದೆ.
ಅಂಬಾರಿಯು ರಾಜವಂಶಸ್ಥರ ಸುಪರ್ದಿಯಲ್ಲಿರುತ್ತದೆ. ಅದನ್ನು ಸಾಮಾನ್ಯವಾಗಿ ವಿಜಯದಶಮಿ ಮೆರವಣಿಗೆಯ ಮುಹೂರ್ತಕ್ಕೆ ಒಂದು ತಾಸು ಮುಂಚಿತವಾಗಿ ಕೊಡಲಾಗುತ್ತದೆ. ಆದರೆ, ಈ ಬಾರಿ ತಡವಾಯಿತು. ಸರ್ಕಾರ ಹಾಗೂ ಅರಮನೆಯ ನಡುವಿನ ಜಟಾಪಟಿಯೇ ಇದಕ್ಕೆ ಕಾರಣ ಎನ್ನಲಾಗತ್ತಿದೆ.
ಅಂಬಾರಿ ದೊರೆಯುವುದು ವಿಳಂಬವಾದ ವಿಷಯ ತಿಳಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಹಾಗೂ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ವೇದಿಕೆ ಬಳಿಯಿಂದ ಅಂಬಾರಿ ಕಟ್ಟುವ ಸ್ಥಳಕ್ಕೆ ತೆರಳಿದ್ದರು.
ತಡವಾದ್ದರಿಂದ, ತರಾತುರಿಯಲ್ಲಿ ಅಂಬಾರಿಯನ್ನು ಕಟ್ಟಲಾಯಿತು ಎಂದು ತಿಳಿದುಬಂದಿದೆ.
Laxmi News 24×7