ಸಂಕೇಶ್ವರ (ಬೆಳಗಾವಿ ಜಿಲ್ಲೆ): ಸಮೀಪದ ಕುರಣಿ ಗ್ರಾಮದ ರೈತ ಅಡಿವೆಪ್ಪ ಶಿವಪ್ಪ ಕಾಚಿ ಅವರು 30 ಗುಂಟೆ ಜಮೀನಿನಲ್ಲಿ 12 ಕ್ವಿಂಟಲ್ ಸೋಯಾಬಿನ್ ಇಳುವರಿ ಪಡೆದಿದ್ದಾರೆ. ತಾವೇ ಕಾದಿಟ್ಟ ಬಿತ್ತನೆ ಬೀಜಗಳಿಗೆ ಸರಿಯಾಗಿ ಪೋಷಣೆ, ಜತೆಗೆ ಸಕ್ಕರೆ ಕಾರ್ಖಾನೆಯಿಂದ ಹೊರಬರುವ ವ್ಯರ್ಥ ಮೊಲಾಸಿಸ್ ಅನ್ನು ಬಿತ್ತನೆ ವೇಳೆ ಬಳಸುವ ಮೂಲಕ ಈ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.
ಪ್ರತಿ ವರ್ಷ ರೈತರಿಗೆ ವಿವಿಧ ಕಂಪನಿಗಳು ಬಿತ್ತನೆ ಬೀಜ ನೀಡುತ್ತವೆ. ಆದರೆ, ಅಡಿವೆಪ್ಪ ಕಂಪನಿ ಬೀಜಗಳಿಂದ ದೂರ. ಹಿಂದಿನ ವರ್ಷ ತಾವೇ ಬೆಳೆದ ಬೆಳೆಯಲ್ಲಿನ ಕೆಲ ಭಾಗವನ್ನು ಬಿತ್ತನೆ ಬೀಜಕ್ಕಾಗಿ ಇಟ್ಟುಕೊಳ್ಳುವುದು ಅವರ ರೂಢಿ. ಕಾಯ್ದಿಟ್ಟುಕೊಂಡಿದ್ದ ಸೋಯಾಬಿನ್ ಬೀಜಗಳಿಂದಲೇ ಈಗ ಭರ್ಜರಿ ಇಳುವರಿ ಪಡೆದಿದ್ದಾರೆ.
ಸೋಯಾಬಿನ್‌ಗೆ ನೀರಾವರಿ ಅವಶ್ಯಕತೆ ಇಲ್ಲ ಎಂಬ ಕಾರಣಕ್ಕೆ ಒಣಭೂಮಿಯ ರೈತರೇ ಹೆಚ್ಚಾಗಿ ಬೆಳೆಯುತ್ತಾರೆ. ಸಾಮಾನ್ಯವಾಗಿ ಒಂದು ಎಕರೆಗೆ (40 ಗುಂಟೆ) ಗರಿಷ್ಠ 7ರಿಂದ 8 ಕ್ವಿಂಟಲ್‌ನಷ್ಟು ಇಳುವರಿ ಬರುತ್ತದೆ. ಆದರೆ, ಅಡಿವೆಪ್ಪ ಅವರು ಮಾಡಿದ ಪ್ರಯೋಗ ಉತ್ತಮ ಫಸಲು ನೀಡಿದೆ.