ರಾಜ್ಯದಲ್ಲಿ ಕೆಲವು ದಿನಗಳಿಂದ ಟೊಮೆಟೋ ಧಾರಣೆ ಏರುಗತಿಯಲ್ಲಿ ಸಾಗುತ್ತಿದೆ. ಅತಿದೊಡ್ಡ ಟೊಮೆಟೋ ಮಾರುಕಟ್ಟೆ ಖ್ಯಾತಿಯ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸದ್ಯ ಕೆ.ಜಿ. ಟೊಮೆಟೋ 30ರಿಂದ 75 ರೂ. ವರೆಗೆ ಹಾಗೂ 15 ಕೆ.ಜಿ.ಯ ಬಾಕ್ಸ್ ಕನಿಷ್ಠ 500ರಿಂದ ಗರಿಷ್ಠ 1,100 ರೂ.ಗೆ ಮಾರಾಟವಾಗುತ್ತಿದೆ.
ದೇಶದ ವಿವಿಧ ಮಹಾನಗರಗಳು, ನೆರೆ ರಾಷ್ಟ್ರಗಳಿಗೂ ಟೊಮೆಟೋ ಕಳುಹಿಸುತ್ತಿದ್ದ ಮಾರುಕಟ್ಟೆಯಿಂದ ಇದೀಗ ಜಿಲ್ಲೆಯ ಅಥವಾ ರಾಜ್ಯದ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲವಾಗಿದೆ.
ಫಸಲು ಕಡಿಮೆಗೆ ಕಾರಣ?
ಟೊಮೆಟೋವನ್ನು ಕಾಡುತ್ತಿರುವ ರೋಗ ಹಾಗೂ ಮಳೆ ಕೊರತೆ, ಸತತವಾಗಿ ಟೊಮೆಟೋ ಬೆಳೆದು ಸತ್ವ ಹೀನವಾಗಿರುವ ಭೂಮಿ, ಗಿಡ ಬೆಳೆದರೂ ಫಸಲು ಬಾರದಂತ ಪರಿಸ್ಥಿತಿ, ಫಸಲು ಬಂದರೂ ಗಾತ್ರದಲ್ಲಿ ಕಳಪೆ ಇತ್ಯಾದಿ ಸಮಸ್ಯೆಗಳು ಬೆಳೆಯನ್ನು ಕಾಡುತ್ತಲೇ ಇದೆ. ಕೆಸಿ ವ್ಯಾಲಿ ನೀರಿನಿಂದಲೂ ಟೊಮೆಟೋ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲವೆಂಬ ಆರೋಪಗಳು ಇವೆ. ಇದರಿಂದ ಈ ಮೊದಲು ಪ್ರತೀ ಎಕರೆಗೆ 30ರಿಂದ 36 ಟನ್ ಟೊಮೆಟೋ ಫಸಲು ಸಿಗುತ್ತಿದ್ದರೆ ಈಗ ಶೇ. 30ರಷ್ಟು ಫಸಲು ಸಿಗುತ್ತಿಲ್ಲ. ಸರಾಸರಿಯಾಗಿ ಕೇವಲ 2ರಿಂದ 5 ಟನ್ ಟೊಮೆಟೋ ಮಾತ್ರವೇ ಸಿಗುವಂತಾಗಿದೆ