ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಕೂಡಲೇ ಪಾಲಿಕೆಯನ್ನು ರಾಜ್ಯ ಸರ್ಕಾರ ಸೂಪರ್ ಸೀಡ್ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ(ಸೆ30) ಪ್ರತಿಭಟನೆ ನಡೆಸಲಾಯಿತು.
ನಗರದ ಸದಾರ‍್ಸ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶ್ರೀರಾಮ ಸೇನಾ ಹಿಂದೂಸ್ಥಾನ, ಮಹಾರಾಷ್ಟç ಏಕೀಕರಣ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಎಸ್‌ಪಿಎಂ ರಸ್ತೆಯಿಂದ ಹಳೆ ಪಿ.ಬಿ. ರಸ್ತೆ ವರೆಗೆ ನಡೆಸಿದ ರಸ್ತೆ ನಿರ್ಮಾಣದಲ್ಲಿ 20 ಕೋಟಿ ರೂ. ಪರಿಹಾರ, ರಸ್ತೆ ನಿರ್ಮಾಣಕ್ಕೆ 7 ಕೋಟಿ ರೂ. ವೆಚ್ಚ ಮಾಡಿರುವುದು ಸೇರಿದಂತೆ ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಸಾರ್ವಜನಿಕರ ಹಣವನ್ನು ಬೇಕಾಬಿಟ್ಟಿಯಾಗಿ ವೆಚ್ಚ ಮಾಡುವ ಮೂಲಕ ಪಾಲಿಕೆಯ ಬೊಕ್ಕಸಕ್ಕೆ ಹಾನಿಯುಂಟು ಮಾಡುತ್ತಿದ್ದು, ಇದರಿಂದ ಬೆಳಗಾವಿ ಜನತೆಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ನಗರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸದೇ ಕೇವಲ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಮಾತು ಕೇಳಿ ಪಾಲಿಕೆಯಲ್ಲಿ ಆಡಳಿತವನ್ನು ಹದಗೆಡಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಜಕೀಯ ಪಕ್ಷಗಳ ಕೈಗೆ ಅಧಿಕಾರ ಸಿಕ್ಕಾಗಿನಿಂದ ಬೆಳಗಾವಿಯಲ್ಲಿ ಸರಿಯಾದ ಕೆಲಸಗಳು ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮಸೇನಾ ಹಿಂದೂಸ್ಥಾನ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಯಾವುದೇ ಸಾರ್ವಜನಿಕ ಕೆಲಸಗಳು ಆಗುತ್ತಿಲ್ಲ. ಬೇಕಾಬಿಟ್ಟಿಯಾಗಿ ಹಣ ಪೋಲು ಮಾಡಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಗಳಿಂದ ಜನ ಬೇಸತ್ತಿದ್ದಾರೆ. ನಗರದ ಬಹುತೇಕ ವಾರ್ಡ್ಗಳಲ್ಲಿ ಕೆಲಸಗಳು ಆಗುತ್ತಿಲ್ಲ. ಜನ ಕೇಳಲು ಹೋದರೆ ಯಾರೂ ಉತ್ತರಿಸುತ್ತಿಲ್ಲ. ಶಾಸಕ ಅಭಯ ಪಾಟೀಲರ ಹಿಡಿತದಲ್ಲಿ ಪಾಲಿಕೆ ಆಡಳಿತ ನಡೆಯುತ್ತಿರುವುದು ನೋಡಿದರೆ ಮುಂದೆ ಪಾಲಿಕೆಯ ಅವನತಿ ಖಚಿತ ಎಂದು ಕಿಡಿಕಾರಿದರು.