ಬೆಳಗಾವಿ: ಇಲ್ಲಿನ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಕಚೇರಿ ಎದುರಿದ್ದ ಕೆಲ ಮರಗಳನ್ನು ಬುಡಸಮೇತ ಕತ್ತರಿಸಲಾಗಿದೆ. ಹಳೆ ಉದ್ಯಾನ, ಕಾಂಪೌಂಡ್ ಕೂಡ ತೆರವು ಮಾಡಲಾಗಿದೆ. ಅದೇ ಜಾಗದಲ್ಲಿ ಸೌಂದರ್ಯೀಕರಣಕ್ಕೆ ₹10 ಲಕ್ಷ ಮೊತ್ತದ ಯೋಜನೆ ರೂಪಿಸಲಾಗಿದೆ.
ಒಂದೇ ಆವರಣದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್), ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್), ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಕಚೇರಿಗಳಿವೆ. ಡಿಸಿಎಫ್ ಮರಿಯಾ ಕ್ರಿಸ್ಟೊ ರಾಜಾ ಡಿ ಅವರು ತಮ್ಮ ಕಚೇರಿ ಮುಂದಿನ ಮರಗಳು ಹಾಗೂ ಹಳೆಯ ಉದ್ಯಾನ ತೆರವು ಮಾಡಿಸಿದ್ದಾರೆ.
10 ಗುಂಟೆ ಜಾಗದಲ್ಲಿ ದಶಕಗಳ ಹಿಂದೆ ಉದ್ಯಾನ ನಿರ್ಮಿಸಲಾಗಿತ್ತು. ಕಟ್ಟಡಕ್ಕಿಂತ ಎತ್ತರ ಬೆಳೆದ ಮರಗಳು ಇಲ್ಲಿದ್ದವು. ಹೂವಿನ ಸಸಿಗಳು, ಕುಂಡಗಳು, ಎಲೆಬಳ್ಳಿ ಕೂಡ ಇದ್ದವು. ಸದ್ಯ ಎಲ್ಲವನ್ನೂ ತೆಗೆದು ನೆಲಸಮ ಮಾಡಲಾಗಿದೆ.
‘ಅರಣ್ಯ ಇಲಾಖೆಯ ವಿವಿಧ ಕಚೇರಿಗಳಿಗೆ ಪ್ರತ್ಯೇಕ ಕಾಂಪೌಂಡ್ ಇದ್ದವು. ಎಲ್ಲ ಕಚೇರಿಗಳೂ ಒಂದೇ ಆವರಣದಲ್ಲಿ ಇರುವಂತೆ ವಿನ್ಯಾಸ ಮಾಡಲಾಗುತ್ತಿದೆ. ಇಲ್ಲಿದ್ದ ನೀಲಗಿರಿ ಮರಗಳು ಟೊಳ್ಳಾಗಿದ್ದವು. ಅವು ಉರುಳಿ ಬೀಳುವ ಸಾಧ್ಯತೆ ಇತ್ತು. 2022ರ ಸೆಪ್ಟೆಂಬರ್ 15ರಂದು ಒಂದು ಮರ ಬುಡಸಮೇತ ಉರುಳಿ ಬಿದ್ದಿತ್ತು. ಆಗಲೇ ಅವುಗಳ ತೆರವಿಗೆ ಅನುಮತಿ ಪಡೆಯಲಾಗಿದೆ’ ಎಂದು ಡಿಸಿಎಫ್ ಮರಿಯಾ ಕ್ರಿಸ್ಟೊ ರಾಜಾ ಡಿ ತಿಳಿಸಿದರು.
‘ಕೆಪಿಟಿ ಕಾಯ್ದೆಯ ಪ್ರಕಾರ ಎಲ್ಲ ಕ್ರಮ ಅನುಸರಿಸಿಯೇ ಮರ ತೆರವು ಮಾಡಲಾಗಿದೆ. ಕಡಿಯಲಾದ ಮರಗಳ ಜಾಗದಲ್ಲಿ ಬೇರೆ ಗಿಡಗಳನ್ನು ನೆಡಲಾಗುವುದು’ ಎಂದು ಅವರು ತಿಳಿಸಿದರು.
‘ಮರಗಳು ಅಪಾಯಕಾರಿ ಎಂಬುದಕ್ಕೆ ವರದಿ ಪಡೆಯಬೇಕಿದೆ. ಆವರಣದಲ್ಲಿ ತೊಂದರೆ ಆಗುತ್ತಿದ್ದರೆ, ಬುಡಸಮೇತ ತೆಗೆಯುವ ಬದಲು ರೆಂಬೆಕೊಂಬೆ ಮಾತ್ರ ಕತ್ತರಿಸಬಹುದು. ಬಹುತೇಕ ಎಲ್ಲ ಕಚೇರಿಗಳಲ್ಲೂ ಇಂಥವೇ ಮರಗಳಿವೆ. ಎಲ್ಲವನ್ನೂ ಕತ್ತರಿಸಿದರೆ ಹೇಗೆ? ಯಾರಾದರೂ ಈ ಕೆಲಸ ಮಾಡಿದರೆ ಅರಣ್ಯ ಇಲಾಖೆಯುವರು ದಂಡ ಹಾಕುತ್ತಾರೆ. ಇಲಾಖೆಯವರೇ ಕತ್ತರಿಸಿದರೆ ಹೇಗೆ’ ಎಂದು ಪರಿಸರಪ್ರಿಯರು ಪ್ರಶ್ನಿಸಿದ್ದಾರೆ.
ರಾಹುಲ್ ಪಾಟೀಲ ಪರಿಸರವಾದಿ ಬೆಳಗಾವಿಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಅರಣ್ಯ ನಾಶವಾಗಿದೆ. ಮರಗಳನ್ನು ಕಾಪಾಡಬೇಕಾದ ಅರಣ್ಯ ಇಲಾಖೆಯೇ ನಾಶ ಮಾಡಿದ್ದು ಸರಿಯಲ್ಲ. ಹಿರಿಯ ಅಧಿಕಾರಿಗಳು ಇದಕ್ಕೆ ಸ್ಪಷ್ಟನೆ ಕೊಡಬೇಕು ಮರಿಯಾ ಕ್ರಿಸ್ಟೊ ರಾಜಾ ಡಿಡಿಸಿಎಫ್ ಬೆಳಗಾವಿನಾವು ಉದ್ಯಾನ ನಿರ್ಮಿಸುತ್ತಿಲ್ಲ. ಕಚೇರಿ ಪ್ರದೇಶ ಸುಧಾರಿಸುತ್ತಿದ್ದೇವೆ. ಆವರಣದಲ್ಲಿ ಹಸಿರು ಹೊದಿಕೆ ನಿರ್ಮಿಸಲಾಗುವುದು. ಉತ್ತಮವಾಗಿ ನಿರ್ವಹಣೆ ಮಾಡಲಾಗುವುದು