ಕಲಬುರಗಿ: ಕಲ್ಯಾಣ ಕರ್ನಾಟಕದ ಸಮಗ್ರ ವಿಕಾಸಕ್ಕೆ ನಮ್ಮ ಸರ್ಕಾರ ಬದ್ಧತೆ ಮುಂದುವರಿಸಿದೆ. ಅದಕ್ಕಾಗಿಯೇ ಪ್ರತಿ ವರ್ಷ 5 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟು ರಸ್ತೆ, ನೀರಾವರಿ, ಆರೋಗ್ಯ, ಶಿಕ್ಷಣದ ವಿಕಾಸಕ್ಕೆ ಕೆಲಸ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ 371(ಜೆ) ಕಲಂ ದಶಮಾನೋತ್ಸವ ಮತ್ತು ಕಲ್ಯಾಣ ಕರ್ನಾಟಕ ಉತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹಿಂದಿನ ಸರ್ಕಾರದ ಅಶಿಸ್ತು, ಭ್ರಷ್ಟಾಚಾರದಿಂದ ರಾಜ್ಯ ಅಧಃಪತನದತ್ತ ಸಾಗಿತ್ತು. ಬಜೆಟ್‌ನಲ್ಲಿ ಅನುದಾನವನ್ನೂ ಘೋಷಣೆ ಮಾಡದೆ ಸಾವಿರಾರು ಕೋಟಿ ರೂ.ಗಳ ಕಾಮಗಾರಿಗಳಿಗೆ ಸಮ್ಮತಿ ನೀಡಿತ್ತು. ಇಂತಹ ಘಳಿಗೆಯಲ್ಲಿ ಜನಾಶೀರ್ವಾದದಿಂದ ಬಂದ ನಾವು ರಾಜ್ಯವನ್ನು ಪುನಃ ಅಭಿವೃದ್ಧಿಯ ಹಳಿಗೆ ತಂದಿದ್ದೇವೆ. ಆದ್ದರಿಂದ ನಮ್ಮ ಬದ್ಧತೆ ಪ್ರಶ್ನಿಸುವಂತಿಲ್ಲ ಎಂದರು.
ಸಂಪುಟ ಉಪ ಸಮಿತಿ ರಚನೆ:
ಸಂವಿಧಾನದ 371(ಜೆ) ಕಲಂ ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ನೀಡಲಾದ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕಾಗಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಮೇಲ್ವಿಚಾರಣೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಈ ಭಾಗದ ಜನರ ಮತ್ತು ಯುವಕರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಪ್ರಸಕ್ತ 2024-25ನೇ ಸಾಲಿನ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ-ಪಂಗಡಗಳ ಸಮುದಾಯದ ಶ್ರೇಯೋಭಿವೃದ್ಧಿಗೆ ಒಟ್ಟು 39,121 ಕೋಟಿ ರೂ. ಮೀಸಲಿಡಲಾಗಿದೆ. ಇದರ ಲಾಭವನ್ನು ಈ ಭಾಗದ ಜನರೂ ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಅಕ್ಷರ ಅವಿಷ್ಕಾರ:
ಕಲ್ಯಾಣದ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಗಾಗಿ ಮಂಡಳಿ 1250 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಅದರಲ್ಲಿ ಅಕ್ಷರ ಅವಿಷ್ಕಾರ ಕಲ್ಯಾಣದಲ್ಲಿ ಹೊಸ ಪರ್ವವನ್ನೇ ಸೃಷ್ಟಿಸಿದೆ. ಮಂಡಳಿಯಿಂದ 2023-24 ಮತ್ತು 2024-25 ಎರಡೂ ವರ್ಷಗಳನ್ನು ಶೈಕ್ಷಣಿಕ ವರ್ಷಗಳೆಂದು ಘೋಷಣೆ ಮಾಡಿದೆ. ಈ ವರ್ಷ 1008 ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಎನ್ನುವ ಹೊಸ ಮಾದರಿ ಪ್ರಾರಂಭಿಸಲಾಗಿದೆ. ನಮ್ಮ ನಿರೀಕ್ಷೆ ಮೀರಿ 36,445 ಮಕ್ಕಳು ಪ್ರವೇಶ ಪಡೆದು ದಾಖಲೆ ಬರೆದಿದ್ದಾರೆ. ಅದಕ್ಕಾಗಿ ಹೊಸದಾಗಿ 1353 ಅತಿಥಿ ಶಿಕ್ಷಕರು, 892 ಸಹಾಯಕಿಯರನ್ನು ನೇಮಕ ಮಾಡಿಕೊಂಡಿದ್ದೇವೆ ಎಂದರು.
Laxmi News 24×7