ಹುಬ್ಬಳ್ಳಿ: ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಆಚರಣೆಗೆ ನಗರದಲ್ಲಿ ಸಿದ್ಧತೆ ಜೋರಾಗಿದ್ದು, ಬೆಲೆ ಏರಿಕೆಯನ್ನು ಲೆಕ್ಕಿಸದೆ ಜನರು ಬುಧವಾರ ಇಲ್ಲಿನ ದುರ್ಗದ್‌ಬೈಲ್ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು.
ಗುರುವಾರ, ಶುಕ್ರವಾರ ಪಂಚಮಿ, ನಾಗರಮೂರ್ತಿಗಳಿಗೆ ಹಾಲೆರೆಯುವ ಹಬ್ಬ ನಡೆಯಲಿದ್ದು, ಇಲ್ಲಿನ ಬಟ್ಟೆ ಅಂಗಡಿ, ಅಲಂಕಾರಿಕ ವಸ್ತುಗಳು, ಹೂ, ಹಣ್ಣಿನ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು.
ನಾಗಪಂಚಮಿಯ ವಿಶೇಷತೆಯಾಗಿರುವ ವಿಧವಿಧವಾದ ಉಂಡಿಗಳನ್ನು ತಯಾರಿಸಲು, ಶೇಂಗಾ, ಎಳ್ಳು, ಕೊಬ್ಬರಿ, ಕಡಲೆಹಿಟ್ಟು, ರವೆ, ಬೆಲ್ಲ, ಸಕ್ಕರೆ, ಅಡುಗೆ ಎಣ್ಣೆ, ಏಲಕ್ಕಿ, ಲವಂಗ, ಉತ್ತತ್ತಿ, ಅಂಟು, ಮುದ್ದೆ ಸಕ್ಕರೆ, ಪೇಪರ್ – ಚೂಡಾ ಅವಲಕ್ಕಿ, ಅಳ್ಳಿನ ಜೋಳ ಹಾಗೂ ಇತರ ವಸ್ತುಗಳನ್ನು ಹೆಚ್ಚೆಚ್ಚು ಖರೀದಿಸಿದರು. ಹಾಲೇರೆಯುವುದಕ್ಕಾಗಿ ಸಾಂಕೇತಿಕವಾಗಿ ಮಾಡಲಾದ ಮಣ್ಣಿನ ನಾಗರ ಮೂರ್ತಿಗಳನ್ನು ಕೂಡ ಖರೀದಿಸಿದರು.
‘ಬೂಂದಿ ಉಂಡಿ, ಶೇಂಗಾ, ಅಂಟು, ಪುಠಾಣಿ, ಬೇಸನ್, ರವೆ ಉಂಡಿ ಕೆ.ಜಿಗೆ ₹160 ರಿಂದ ₹180ಕ್ಕೆ ಮಾರಾಟ ಮಾಡಲಾಗಿದೆ. ಗುಣಮಟ್ಟ ಕಾಯ್ದುಕೊಂಡಿರುವುದರಿಂದ, ನಮ್ಮಲ್ಲಿನ ಕಾಯಂ ಗ್ರಾಹಕರು ಮುಂಚಿತವಾಗಿಯೇ ಖರೀದಿಗೆ ಆರ್ಡ್‌ರ್ ಕೊಟ್ಟಿರುತ್ತಾರೆ. ಕಳೆದ ಸಲಕ್ಕೆ ಹೋಲಿಸಿದರೆ ಈ ಸಲ ₹10ರಿಂದ ₹20 ದರ ಹೆಚ್ಚಾಗಿದೆ. ದರ ಏರಿಕೆ ಇದ್ದರೂ ಜನ ಖರೀದಿಗೆ ಬರುತ್ತಿದ್ದಾರೆ’ ಎಂದು ದುರ್ಗದ್‌ಬೈಲ್‌ನ ಎಂ.ಜಿ ಮಾರ್ಕೆಟ್‌ನ ಸಿಹಿತಿಂಡಿ ವ್ಯಾಪಾರಸ್ಥ ದಯಾನಂದ ತಿಳಿಸಿದರು.